ಕ್ಷೇತ್ರಾಭಿವೃದ್ಧಿ ನಿಧಿಯ ಬಡ್ಡಿಗೂ ಕ್ರಿಯಾಯೋಜನೆ !
ಮಂಗಳೂರು: ರಾಜ್ಯದಲ್ಲಿಯೇ ಅತಿ ಹೆಚ್ಚು ಸಂಸದರ ನಿಧಿ 19.2 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆ ಮಾಡಿರುವ ಸಂಸದ ನಳಿನ್ ಕುಮಾರ್ ಕಟೀಲ್, ಸಂಸದರ ನಿಧಿ ಹಣಕ್ಕೆ ಬಂದ 50-60 ಲಕ್ಷ ಬಡ್ಡಿಗೂ ಕೂಡಾ ಕ್ರಿಯಾಯೋಜನೆ ರೂಪಿಸಿ ದಾಖಲೆ ಮಾಡಿದ್ದಾರೆ.
ಶನಿವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ 'ನಳಿನ್ ಕುಮಾರ್ ಕಟೀಲ್ ಸಂಸದರಾಗಿ ಐದು ವರ್ಷ, ಕ್ಷೇತ್ರಾಭಿವೃದ್ಧಿ ಪಥದಲ್ಲಿ' ಮಾಹಿತಿ ಕೈಪಿಡಿ ಸಂದರ್ಭ ಈ ವಿಚಾರವನ್ನು ಸಂಸದ ನಳಿನ್ ಕುಮಾರ್ ಬಹಿರಂಗ ಪಡಿಸಿದರು.
19.61 ಕೋಟಿ ಸಂಸದ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗಿದೆ. ಬಿಎಸ್ವೈ ಮುಖ್ಯಮಂತ್ರಿಯಾಗಿದ್ದ ವೇಳೆ ವಿಶೇಷ ಅನುದಾನದಡಿ 6 ಕೋಟಿ ಅಭಿವೃದ್ಧಿ ಕಾಮಗಾರಿಗೆ ನೇರವಾಗಿ ಬಿಡುಗಡೆ ಮಾಡಲಾಗಿದೆ.
ಜಿಲ್ಲೆಯ ಜನರ ನಾನಾ ರೀತಿಯ ನಿಡ್ಡೋಡಿ ಸ್ಥಾವರ, ಅಡಕೆ ಸಮಸ್ಯೆ ಮತ್ತು ಅಭಿವೃದ್ಧಿ ಕುರಿತು ಸಂಸತ್ತಿನಲ್ಲಿ ವಿಚಾರ ಎತ್ತಿದ್ದೇನೆ. 283 ಪ್ರಶ್ನೆಗಳನ್ನು ಕೇಳಿದ್ದೇನೆ, ಅಲ್ಲಿ ನನ್ನ ಹಾಜರಿ ಶೇ.70ಕ್ಕೂ ಹೆಚ್ಚು. ಕ್ಷೇತ್ರಕ್ಕೆ ಕೇಂದ್ರ, ರಾಜ್ಯ ಸಹಿತ ಎಲ್ಲ ಇಲಾಖೆಗಳಿಂದ ಐದು ವರ್ಷಗಳಲ್ಲಿ ಹೆದ್ದಾರಿ, ಕುಡಿಯುವ ನೀರು, ಶೈಕ್ಷಣಿಕ ಸವಲತ್ತುಗಳು ಸಹಿತ 1,340.83 ಕೋಟಿ ನಿಧಿಯನ್ನು ಅಭಿವೃದ್ಧಿ, ಪರಿಹಾರಕ್ಕೆ ಬಿಡುಗಡೆ ಮಾಡಿಸಿದ್ದು, ಫಲಾನುಭವಿಗಳಿಗೆ ತಲುಪಿದೆ ಎಂದರು. ಪ್ರತಿ ಮೂರು ತಿಂಗಳಿಗೊಮ್ಮೆ ರೇಲ್ವೆ ಇಲಾಖೆ ಸಭೆ ನಡೆಸಿದ ಬೇಡಿಕೆ ಮತ್ತು ಪ್ರಗತಿ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದರು.
ಮಾಹಿತಿ ಕೈಪಿಡಿಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ಬಿಡುಗಡೆ ಗೊಳಿಸಿದರು. ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಸುಲೋಚನಾ ಜಿ.ಕೆ.ಭಟ್ ಇತರರು ಇದ್ದರು.
ಮಾಹಿತಿ ಕೈಪಿಡಿ ವಿಶೇಷ: ಯಾರಿಂದಲೂ ಲಂಚ ಪಡೆಯದೆ, ಹಗರಣದಲ್ಲಿ ಸಿಲುಕದೆ, ಅಕ್ರಮ ಸಂಪತ್ತುಗಳಿಸದ ಅಪರೂಪದ ಸಂಸದ ಎಂಬ ಕುರಿತು ಅಂತರ್ಜಾಲದಲ್ಲಿ ಸುದ್ದಿತಾಣಗಳು ಪ್ರಕಟಿಸಿವೆ.
ಗ್ರಾಮಭೇಟಿ, ಸರ್ಕಾರಿ, ಖಾಸಗಿ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಭಾಗವಹಿಸಿ, 100ಕ್ಕೂ ಹೆಚ್ಚು ದೇವಸ್ಥಾನ, 50ಕ್ಕೂ ಹೆಚ್ಚು ಮಸೀದಿ, ಚರ್ಚ್, ಬಸದಿಗಳಿಗೆ 10 ಕೋಟಿ ಮೊತ್ತ ಆದ್ಯತೆ ಮೇರೆಗೆ ನೀಡಿರುವುದು.
ಎಸ್ಇಝಡ್ ಹೋರಾಟದಲ್ಲಿ ರೈತರಿಗೆ ನ್ಯಾಯ ಒದಗಿಸಿಕೊಟ್ಟದ್ದು, ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ಮತ್ತು ಮೂಡುಬಿದರೆ ಎಂಜಲ್ಹಾರ್ಡ್ ಕಂಪನಿ ವಿರುದ್ಧ ಹೋರಾಟ ಸಂಘಟಿಸಿರುವುದು.
ಪಡೀಲ್ ರೈಲು ಮೇಲ್ಸೇತುವೆ ಕಾಮಗಾರಿಗೆ ಅನುಮೋದನೆ, ಬೈಕಂಪಾಡಿ ರೈಲ್ವೆ ಹಳಿ ಮೇಲ್ಭಾಗದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಮಸ್ಯೆ ಪರಿಹಾರ, 6 ರೈಲು ಓಡಾಟಕ್ಕೆ ನೀಡಿದ ಪ್ರಯತ್ನ ಫಲ ನೀಡಿದೆ ಎಂದು ಕೈ ಪಿಡಿಯಲ್ಲಿ ವಿವರಿಸಲಾಗಿದೆ.