ನಳಿನ್ ವಿರುದ್ಧ ಮುಂದುವರಿದ ಪಿತೂರಿ
ಮಂಗಳೂರು: ಸಂಸದ ನಳಿನ್ಕುಮಾರ್ ಕಟೀಲ್ ವಿರುದ್ಧ ಟಿಕೆಟ್ ಕೈತಪ್ಪಿಸುವ ಪಕ್ಷದ ಒಳಗಿನ ಪಿತೂರಿ ಮತ್ತಷ್ಟು ತೀವ್ರವಾಗುತ್ತಿದೆ.
ಸಂಸದರ ಟಿಕೆಟ್ ತಪ್ಪಿಸಲು ಪಕ್ಷದೊಳಗಿರುವ ಪ್ರಭಾವಿಗಳು ಬ್ಲ್ಯಾಕ್ಮೇಲ್ ತಂತ್ರಕ್ಕೂ ಮುಂದಾಗಿದ್ದಾರೆ. ಸಂಸದರ ಮೇಲೆ ಇಲ್ಲ, ಸಲ್ಲದ ಆರೋಪಗಳ, ದಾಖಲೆಗಳನ್ನು ಮಾಡಿ ಆರ್ಎಸ್ಎಸ್ ಮುಖಂಡರ ಬಳಿಗೆ ಒಯ್ದಿದ್ದಾರೆ. ಅವರು ದಾಖಲೆಗಳ ಸಾಚಾತನ ಬಗ್ಗೆ ಪ್ರಶ್ನಿಸಿ ವಾಪಸ್ ಕಳುಹಿಸಿದ್ದಾರೆ.
ಆರ್.ಎಸ್.ಎಸ್. ಮತ್ತು ಬಿಜೆಪಿ ವರಿಷ್ಠರು ನಳಿನ್ಕುಮಾರ್ ಕಟೀಲ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಎಂದು ಘಂಟಾ ಘೋಷವಾಗಿ ಹೇಳಿದರೂ ಟಿಕೆಟ್ಗಾಗಿ ಅತೃಪ್ತ ನಾಯಕರು ಮಾಡು ಇಲ್ಲವೇ ಮಡಿ ಪ್ರಯತ್ನ ಮುಂದುವರಿಸಿದ್ದಾರೆ.
ಇದೆಲ್ಲ ಬೆಳವಣಿಗೆಗಳಿಂದ ನಳಿನ್ ಘಾಸಿಗೊಂಡಿದ್ದಾರೆ. 'ಮೊದಲೇ ಗೌರವ ಯುತವಾಗಿ ಹೇಳಿದ್ದರೆ ನಾನೇ ಟಿಕೆಟ್ ನಿರಾಕರಿಸುತ್ತಿದ್ದೆ. ಅಭ್ಯರ್ಥಿ ಯಾರೆಂದು ಹೇಳಿದರೆ ಅವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದ್ದೆ. ಆದರೆ, ಈಗ ರಣರಂಗಕ್ಕೆ ಇಳಿದಾಗಿದೆ. ಈಗ ತೇಜೋವಧೆಗೆ ಮುಂದಾಗಿರುವುದು ಸರಿ ಅಲ್ಲ' ಎಂದು ತಮ್ಮ ಆಪ್ತ ವಲಯದಲ್ಲಿ ಅವಲತ್ತುಕೊಂಡಿದ್ದಾರೆ.
ಮನೆಗೆ ನುಗ್ಗಿ ದಾಂದಲೆ: ಮೂವರು ವಶಕ್ಕೆ
ಪುತ್ತೂರು: ತಂಡವೊಂದು ಮನೆಯೊಂದಕ್ಕೆ ನುಗ್ಗಿ ದಾಂದಲೆ ನಡೆಸಿದ ಘಟನೆ ತಾಲೂಕಿನ ಆರ್ಯಾಪು ಗ್ರಾಮದ ಕುಂಜೂರು ಪಂಜ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ. ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕುಂಜೂರು ಪಂಜ ನಿವಾಸಿ, ಬಜರಂಗದಳ ಕಾರ್ಯಕರ್ತ ಜಯಂತ ಎಂಬವರ ಮನೆಗೆ ಸೋಮವಾರ ತಡರಾತ್ರಿ ಏಕಾಏಕಿ ಪ್ರವೇಶ ಮಾಡಿದ 8 ಮಂದಿಯ ತಂಡ, ಮನೆಯಲ್ಲಿದ್ದ ಉಪಕರಣಗಳನ್ನು ಧ್ವಂಸ ಮಾಡಿದೆ. ದಾಂದಲೆ ನಡೆಸಿದ ಸಂದರ್ಭ ತಾನು ಮನೆಯಲ್ಲಿ ಇರಲಿಲ್ಲ, ತಾಯಿ ಒಬ್ಬರೇ ಇದ್ದರು. ಯಾವ ಕಾರಣಕ್ಕೆ ಈ ದಾಂದಲೆ ನಡೆಸಿದ್ದಾರೆ ಎಂಬುದು ಗೊತ್ತಾಗಿಲ್ಲ ಎಂದು ಜಯಂತ್ ತಿಳಿಸಿದ್ದಾರೆ. ಸಂಪ್ಯ ಪೊಲೀ ಸರು ಪ್ರಕರಣ ದಾಖಲಿಸಿದ್ದು, ಆರೋಪಿಗಳಾದ ನರ್ಮೇಶ್, ಸೋಮಪ್ಪ ಮತ್ತು ಜೀವನ್ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ದನದ ಕಳೇಬರ ಪತ್ತೆ, ಹುಲಿ ದಾಳಿ ಶಂಕೆ
ಸುಳ್ಯ: ತೊಡಿಕಾನ ಗ್ರಾಮದ ಪೆತ್ತಾಜೆ ಬಳಿ ದನವೊಂದನ್ನು ಹುಲಿ ಹಿಡಿದು ತಿಂದ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ರಸ್ತೆ ಬದಿ ಅರ್ಧ ತಿಂದ ಸ್ಥಿತಿಯಲ್ಲಿ ದನದ ಕಳೇಬರ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಮನೆಯಲ್ಲಿ ಸಾಕಿದ್ದ ಮುಳ್ಳುಹಂದಿ, ಕಾಡುಬೆಕ್ಕು ವಶ
ಮಂಗಳೂರು: ಉಡುಪಿ ಪೆರಂಪಳ್ಳಿ ಕುಕ್ಕಿಕಟ್ಟೆ ಎಂಬಲ್ಲಿ ಅಕ್ರಮವಾಗಿ ಬಂಧನದಲ್ಲಿರಿಸಿದ ಮುಳ್ಳು ಹಂದಿ ಹಾಗೂ ಎರಡು ಕಾಡು ಬೆಕ್ಕುಗಳನ್ನು ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮನೆಯಲ್ಲಿ ಕಾಡು ಪ್ರಾಣಿ ಸಾಕಿದ ಆರೋಪಿ ಲಕ್ಷ್ಮಣ ನಾಯ್ಕ್ (46) ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಡುಪ್ರಾಣಿಗಳನ್ನು ಕೋರ್ಟ್ ಆದೇಶದಂತೆ ಪಿಲಿಕುಳ ನಿಸರ್ಗಧಾಮಕ್ಕೆನೀಡಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದಾನೆ. ಆರಣ್ಯ ಸಂಚಾರಿ ದಳ ಸಬ್ಇನ್ಸ್ಪೆಕ್ಟರ್ ಶೇಖರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
ವಳಲಂಬೆ: ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ
ಸುಳ್ಯ: ವಳಲಂಬೆಯಲ್ಲಿ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ನಡೆಸಿದಿದೆ. ಜೀವನ್, ಗಿರೀಶ್, ಕುಲದೀಪ್, ಮಾಜಿ ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಪುರ್ಲುಮಕ್ಕಿ, ಅಂಗೀರಸ ಮತ್ತಿತರರ ಮೇಲೆ ಹೆಜ್ಜೇನು ದಾಳಿ ನಡೆಸಿತು. ಕೂಡಲೆ ಅವರನ್ನು ಗುತ್ತಿಗಾರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಶಿಕ್ಷಣಾಧಿಕಾರಿಗೆ ಕೂಡಲೆ ಈ ಬಗ್ಗೆ ಮಾಹಿತಿ ನೀಡಿದ್ದು, ನಂತರ ಶಾಲೆಗೆ ರಜೆ ಘೋಷಿಸಲಾಯಿತು.
ಪಲ್ಗುಣಿ ನದಿಗೆ ಬಿದ್ದು ಯುವಕ ಆಕಸ್ಮಿಕ ಸಾವು
ಬಂಟ್ವಾಳ: ಪಲ್ಗುಣಿ ನದಿಗೆ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಸಂಗಬೆಟ್ಟು ಗ್ರಾಮದ ಪುಚ್ಚಮೊಗರು ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ. ಮೃತ ಯುವಕನನ್ನು ಹರೇಕಳ ಗ್ರಾಮದ ಪಾವೂರು ನಿವಾಸಿ ಪಿ.ಕೆ. ಅಬೂಬಕರ್ ಎಂಬವರ ಪುತ್ರ ನೌಷದ್ (23) ಎಂದು ಗುರುತಿಸಲಾಗಿದೆ. ಮೂಡಬಿದಿರೆಯ ಆರಿಸ್ ಎಂಬವರ ಹೋಟೆಲ್ನಲ್ಲಿ ಕೆಲಸಕ್ಕಿದ್ದ ನೌಷದ್ ತಿಂಗಳಿಗೊಂದು ಬಾರಿ ಹರೇಕಳದ ತನ್ನ ಮನೆಗೆ ತೆರಳುತ್ತಿದ್ದ. ಸೋಮವಾರ ಬಂದ್ ಇದ್ದ ಹಿನ್ನೆಲೆಯಲ್ಲಿ ನೌಷಾದ್ ಹರೇಕಳದ ಮನೆಗೆ ತೆರಳಿದ್ದ, ಸಂಜೆ 5 ಗಂಟೆಯ ಸುಮಾರಿಗೆ ಸ್ನೇಹಿತರಾದ ರಶೀದ್, ರಿಯಾಝ್ ಎಂಬವರು ಕರೆಮಾಡಿದ ಹಿನ್ನೆಲೆಯಲ್ಲಿ ಅವರ ಜೊತೆಗೆ ಪುಚ್ಚಮೊಗರಿನ ಪಲ್ಗುಣಿ ನದಿ ಕಿನಾರೆಗೆ ಬಂದಿದ್ದ. ಅಣೆಕಟ್ಟಿನ ಮೇಲೆ ಮಾತನಾಡಿಕೊಂಡು ನಡೆಯುತ್ತಿದ್ದ ವೇಳೆ, ನೌಷದ್ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು. ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಶಿಶಿಲ ದೇವಳದಲ್ಲಿ ಇಂದಿನಿಂದ ಬ್ರಹ್ಮಕಲಶೋತ್ಸವ
ಉಪ್ಪಿನಂಗಡಿ: ಮತ್ಸ್ಯ ತೀರ್ಥ ಶಿಶಿಲೇಶ್ವರ ದೇವಳದಲ್ಲಿ ಮಂಗಳವಾರದಿಂದ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂದ ಬ್ರಹ್ಮಕಲಶೋತ್ಸವವು ಆರಂಭವಾಗಲಿದ್ದು, 9ರವರಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಂಗಳವಾರ ಉಗ್ರಾಣ ಮುಹೂರ್ತ ಹೊರಕಾಣಿಕೆ ಸಮರ್ಪಣೆ, ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ.
ಪುತ್ತೂರು: ಇಂದು ಚಾರ್ವಾಕ ದೇವಳಕ್ಕೆ ಯಡಿಯೂರಪ್ಪ
ಪುತ್ತೂರು: ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಕಪಿಲೇಶ್ವರ ಸಮುದಾಯ ಭವನ ಲೋಕಾರ್ಪಣೆಯನ್ನು 4ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೆರವೇರಿಸಲಿದ್ದಾರೆ ಎಂದು ದೇವಳ ಆಡಳಿತ ಮೊಕ್ತೇಸರ ಮೋಹನ್ ಗೌಡ ಇಡ್ಯಡ್ಕ ತಿಳಿಸಿದ್ದಾರೆ.