ನೀರಿಗಾಗಿ ಮೊದಲ ಬಂದ್
ಮಂಗಳೂರು: ನೇತ್ರಾವತಿ ನದಿ ತಿರುಗಿಸುವ ಎತ್ತಿನಹೊಳೆ ಯೋಜನೆ ವಿರೋಧಿಸಿ ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್‌ಗೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ಸಂಚಾರ ಸ್ಥಗಿತವಾಗಿದ್ದು, ವಾಣಿಜ್ಯ ಮಳಿಗೆಗಳು, ಶಾಲೆ, ಕಾಲೇಜ್‌ಗಳು ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.
ಸದಾ ಧರ್ಮ, ಅಪರಾಧ ಕುರಿತಾಗಿ ಬಂದ್ ಆಚರಿಸುತ್ತಿದ್ದ ಜಿಲ್ಲೆಯಲ್ಲಿ ಮೊತ್ತ ಮೊದಲ ಬಾರಿಗೆ ನೀರಿನ ವಿಚಾರವಾಗಿ ನೇತ್ರಾವತಿ ಜೀವ ನದಿ ಉಳಿಸಲು ಕರೆ ನೀಡಲಾದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಕರಾವಳಿ ಜೀವನದಿ ರಕ್ಷಣೆ ಸಮಿತಿ ಕರೆ ನೀಡಿದ ಬಂದ್‌ಗೆ ಕರ್ನಾಟಕ ರಕ್ಷಣೆ ವೇದಿಕೆ, ತುಳು ರಕ್ಷಣೆ ವೇದಿಕೆ, ವಿವಿ ಉಪನ್ಯಾಸಕರ ಸಂಘ, ಮೀನುಗಾರರ ಸಂಘ, ಮಂಗಳೂರು ಖಾಜಿ ಸಹಿತ ಅನೇಕ ಸಂಘಟನೆಗಳು ಜೆಎಸ್, ಬಿಜೆಪಿ ಪಕ್ಷಗಳು ಬೆಂಬಲ ಸೂಚಿಸಿದ್ದವು. ಜಿಲ್ಲಾ ಕಾಂಗ್ರೆಸ್ ಮಾತ್ರ ಬೆಂಬಲ ನೀಡುವುದಿಲ್ಲ ಎಂದು ಹೇಳಿತ್ತು.
ಮಂಗಳೂರು ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ಬೆಂಗಳೂರಿಂದ ಬಂದಿಳಿದ ಬಸ್ ಪ್ರಯಾಣಿಕರಿಗೆ ಊರಿಗೆ ತೆರಳಲು ಅವಕಾಶ ನೀಡಲಾಗಿತ್ತು. ಬಳಿಕ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಸಂಚರಿಸಲಿಲ್ಲ. ಶಾಲೆ, ಕಾಲೇಜ್‌ಗಳಿಗೆ ಮುಂಚಿತವಾಗಿ ರಜೆ ಘೋಷಿಸಲಾಗಿತ್ತು. ಮಾ.3ರಂದು ನಡೆಯಬೇಕಿದ್ದ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪೂರ್ವಭಾವಿ ಪರೀಕ್ಷೆಗಳನ್ನು ಕ್ರಮವಾಗಿ ಮಾ.5 ಮತ್ತು ಸಾ.10ಕ್ಕೆ ಮುಂದೂಡಲಾಯಿತು.
ಟ್ರಾಫಿಕ್ ನಿರಾಳ: ಸದಾ ವಾಹನ ಸಂಚಾರದಿಂದ ಗಿಜಿಗುಡುತ್ತಿದ್ದ ಹಂಪನಕಟ್ಟೆ, ಬಲ್ಮಠ, ಜ್ಯೋತಿ ವೃತ್ತಗಳು ಬಿಕೋ ಎನ್ನುತ್ತಿದ್ದವು. ಸಿಗ್ನಲ್ ಲೈಟ್‌ಗಳಿಗಂತೂ ಕೆಲಸವೇ ಇರಲಿಲ್ಲ. ಸಂಚಾರಿ ಪೊಲೀಸರು ಆರಾಮವಾಗಿ ಪತ್ರಿಕೆ ಓದುತ್ತಾ ಕುಳಿತಿರುವ ದೃಶ್ಯಗಳು ಅಲ್ಲಲ್ಲಿ ಕಂಡು ಬಂತು. ಕೆಲವೆಡೆ ಸಂಚಾರಿ ಪೊಲೀಸರು ನಿಲ್ಲುವ ಬೂತ್‌ಗಳನ್ನು ರಸ್ತೆ ಮೇಲೆ ಕೆಡವಿ ಹಾಕಲಾಗಿತ್ತು.
ಬೆಳಗ್ಗಿನ ಜಾವ ತೊಕ್ಕೊಟ್ಟು, ಉಳ್ಳಾಲ, ಕೊಟ್ಟಾರ, ನಂತೂರು, ಉರ್ವಸ್ಟೋರ್ ಸಹಿತ ನಗರದ ಅಲ್ಲಲ್ಲಿ ಟಯರ್‌ಗಳಿಗೆ ಬೆಂಕಿ ನೀಡಿ ಸಂಚಾರಕ್ಕೆ ತಡೆ ಒಡ್ಡಲಾಯಿತು. ಬೆಳಗ್ಗಿನ ಜಾವ ಕೆಲವು ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಕಲ್ಲು ತೂರಿದ ಬಳಿ ಬಸ್ ಸಂಚಾರ ಸ್ಥಗಿತವಾಯಿತು.
ಹೆದ್ದಾರಿ ಬಂದ್: ಸುರತ್ಕಲ್ ಪರಿಸರದಲ್ಲಿ ಹಿಂದು ಜಾಗರಣೆ ವೇದಿಕೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ನಗರದಲ್ಲಿ ಕಾಣಿಸಿಕೊಂಡು ಯೋಜನೆ ವಿರುದ್ಧ ಧಿಕ್ಕಾರ ಕೂಗಿದರು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೆಲವು ಗಂಟೆಗಳ ಕಾಲ ಸುರತ್ಕಲ್ ಮೇಲ್ಸೇತುವೆ ಪ್ರದೇಶದಲ್ಲಿ ಬಂದ್ ಆಯಿತು.
ಗಡಿ ಬಿಡಿ: ರಾಜ್ಯದ ಗಡಿ ತಲಪಾಡಿಯಲ್ಲಿ ಕೇರಳದಿಂದ ಬಂದ ಪ್ರಯಾಣಿಕರು ಬಂದ್ ಬಿಸಿ ಅನುಭವಿಸಿದರು. ಕೇರಳದಿಂದ ಬರುತ್ತಿದ್ದ ಬಸ್‌ಗಳನ್ನು ತಲಪಾಡಿ ಗಡಿಯಿಂದ ರಾಜ್ಯಕ್ಕೆ ಪ್ರವೇಶಿಸಲು ಹೋರಾಟಗಾರರು ಬಿಟ್ಟಿಲ್ಲ. ಹೀಗಾಗಿ ಬಂದವರು ಹಾಗೆಯೇ ವಾಪಸ್ ಕೇರಳದ ತಮ್ಮೂರುಗಳಿಗೆ ತೆರಳಬೇಕಾಯಿತು. ಬಾಗಲಕೋಟೆಯಿಂದ ಬಂದಿದ್ದ ಕಾರ್ಮಿಕರು ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿಂದ ಕದಲಿರಲಿಲ್ಲ. ಎರಡು ಕಿ.ಮೀ. ದೂರದ ಕೊಂಚಾಡಿಗೆ ಹೋಗಲೂ ಹೆದರಿದ್ದ ಅವರು 'ಬಂದ್ ಇತ್ತಲ್ಲ, ಅದಕ್ಕೆ ಇಲ್ಲೇ ಉಳಿದಿದ್ದೇವೆ' ಎಂದು ಪ್ರತಿಕ್ರಿಯಿಸಿದರು.
ಮೂತ್ರ ಕುಡಿತೀರಾ?: ಹೆಚ್ಚಿನ ಹೊಟೇಲ್, ಅಂಗಡಿ, ಮಳಿಗೆಗಳು ಸ್ವಯಂಪ್ರೇರಿತವಾಗಿ ಮುಚ್ಚಿದ್ದವು. ಕೆಲವೆಡೆ ಸಂಘಟನೆಯವರು ಮಳಿಗೆ ಬಂದ್ ಮಾಡುವ ಪ್ರಯತ್ನ ನಡೆಸಿದರು. ಅಂಗಡಿ ತೆರೆದಿಟ್ಟವರ ಬಳಿ ತೆರಳಿದ ಹೋರಾಟಗಾರರು ಅಂಗಡಿ ಬಂದ್ ಮಾಡುವಂತೆ ಎಚ್ಚರಿಸಿ 'ನೀರು ಕೊನೋಂಡ ನಿಕುಲು ಮೊಯ್ಲಿನ ಪಡ್ಕೆ ಪರ್ಪರಾ' (ನೀರು ಕೊಂಡೊಯ್ದರೆ ನೀವು ಮೊಯ್ಲಿಯ ಮೂತ್ರ ಕುಡಿಯುತ್ತೀರಾ) ಎಂದು ಹಂಗಿಸಿದರು. ಟೀಕೆ ಬಳಿಕ ಅಂಗಡಿ ಮುಚ್ಚಿದರು.
ಕಾದ ಪ್ರಯಾಣಿಕರಿಗೆ ಊಟ: ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಬಂದ್ ನಿಂದ ಬಸ್ ಸಿಗದೆ ಕುಳಿತಿದ್ದವರಿಗೆ ಶಾಸಕ ಜೆ.ಆರ್.ಲೋಬೋ ಉಚಿತವಾಗಿ ಊಟ ವಿತರಿಸಿದರು. ಕಾರ್ಯಕರ್ತರು ಸಹಿತ 500 ಮಂದಿ ಉಚಿತ ಊಟದ ಸವಿ ಉಂಡರು. 'ನೇತ್ರಾವತಿ ನದಿ ನೀರಿಗಾಗಿ ಸ್ವಯಂ ಪ್ರೇರಿತರಾಗಿ ಬಂದ್ ಮಾಡುವ ಮೂಲಕ ಜನರು ಭಾವನೆ ವ್ಯಕ್ತಪಡಿಸಿದ್ದಾರೆ. ಜನರ ಭಾವನೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರುತ್ತೇವೆ' ಎಂದು ಶಾಸಕ ಲೋಬೊ ಹೇಳಿದರು.
ಮರಣ ಗಂಟೆ ಬಾರಿಸಿದರು: ನೇತ್ರಾವತಿ ನದಿ ತಿರುವು ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಶಂಕುಸ್ಥಾಪನೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹೋರಾಟಗಾರರು ಮರಣ ಗಂಟೆ ಬಾರಿಸಿ ಪ್ರತಿಭಟಿಸಿದರು. ಕಪ್ಪು ಪಟ್ಟಿ ಹಲಗೆ ತುಂಡಿಗೆ ನೇತು ಹಾಕಿದ ಗಂಟೆ ಬಾರಿಸಿ, ಮರಣದ ಸೂತಕ ದಿನವಾಗಿ ಆಚರಿಸಿದರು.
ಪ್ರತ್ಯೇಕ ರಾಜ್ಯ ಕೂಗು!: ರಾಷ್ಟ್ರೀಯ ಪರಿಸರ ಸಂರಕ್ಷಣೆ ಒಕ್ಕೂಟ ಆಯೋಜಿಸಿದ ಪ್ರತಿಭಟನೆಯಲ್ಲಿ ಡಾ.ಅಣ್ಣಯ್ಯ ಕುಲಾಲ್, ಶಶಿರಾಜ್ ಶೆಟ್ಟಿ ಕೊಳಂಬೆ, ಮಾಜಿ ಕಾರ್ಪೊರೇಟರ್ ಮರಿಯಮ್ಮ ಥಾಮಸ್ ಪ್ರತ್ಯೇಕ ರಾಜ್ಯದ ಕೂಗಿಗೆ ಈ ಚಳವಳಿ ಮೊದಲ ಹೆಜ್ಜೆ ಎಂದರು.
ಮೊಯ್ಲಿ ಗೌಡ ಪ್ರತಿಕೃತಿ ದಹನ: ಸರ್ವ ಕಾಲೇಜ್ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಯೋಜನೆಗೆ ಅನುಮತಿ ನೀಡಿದ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಪ್ರತಿಕೃತಿಗಳನ್ನು ದಹಿಸಿದರು. ಇಬ್ಬರ ಕಣ್ಣಿಗೆ ಕಪ್ಪು ಪಟ್ಟಿ ಹಾಕಿ, ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಕಾಲಿನಿಂದ ಒದ್ದು ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರದಲ್ಲಿ ಯೋಜನೆ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು ಬೇಡವಾದ ಯೋಜನೆಗಳನ್ನು ಜಾರಿಗೆ ತರಲು ಯತ್ನಿಸಿದ ಡಿವಿಎಸ್ ಮತ್ತು ಮೊಯ್ಲಿ ಊರಿಗೆ ಬಂದಾಗ ಘೇರಾವ್ ಹಾಕುತ್ತೇವೆ ಎಂದು ಸರ್ವ ಕಾಲೇಜ್ ಸಂಘದ ದಿನಕರ ಶೆಟ್ಟಿ ಎಚ್ಚರಿಸಿದರು.
ಚಪ್ಪಲಿ ಹಾರ: ಕೇಂದ್ರ ಇಂಧನ ಸಚಿವ ಎಂ. ವೀರಪ್ಪ ಮೊಯ್ಲಿ ಬ್ಯಾನರ್‌ಗಳನ್ನು ಬಲ್ಮಠ ವೃತ್ತ ಬಳಿ ನೇತು ಹಾಕಿ, ಚಪ್ಪಲಿ ಹಾರದಿಂದ ಅಲಂಕರಿಸಿದ್ದರು. ಉಂಡ ಮನೆಗೆ ಕನ್ನ ಹಾಕಿದ ದ್ರೋಹಿಗಳು ಎಂದು ಕಾಂಗ್ರೆಸ್ ಕಾರ್ಯಕರ್ತರೇ ಮೊಯ್ಲಿಗೆ ಅಲ್ಲಲ್ಲಿ ಹಿಡಿಶಾಪ ಹಾಕುತ್ತಿದ್ದರು. ಉಳಿದಂತೆ ಜಿಲ್ಲೆಯಾದ್ಯಂತ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.