ಪುತ್ತೂರು ಪೇಟೆ ಪೂರ್ಣ ಬಂದ್
ಪುತ್ತೂರು: ದ.ಕ. ಜಿಲ್ಲಾ ಬಂದ್‌ಗೆ ಪುತ್ತೂರು ನಗರದರಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಅಂಶಿಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೇಟೆಯಲ್ಲಿ ಸಂಪೂರ್ಣ ಬಂದ್ ಆಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತೆರೆದಿದ್ದವು. ಪುತ್ತೂರು ಪೇಟೆಯಲ್ಲಿನ ಎಲ್ಲಾ ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ವ್ಯಕ್ತ ಪಡಿಸಿದರು. ದ್ವಿಚಕ್ರ ವಾಹನ ಹೊರತು ಪಡಿಸಿ ಬಸ್, ಕಾರು, ರಿಕ್ಷಾ ಇನ್ನಿತರ ವಾಹನಗಳು ಓಡಾಟ ನಡೆಸಿಲ್ಲ. ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕ್ ತೆರೆದಿತ್ತಾದರೂ ಗ್ರಾಹಕ ಸಂಖ್ಯೆ ವಿರಳವಾಗಿತ್ತು. ಪೇಟೆಯ ರಸ್ತೆಯು ವಾಹನಗಳ ಓಡಾಟವಿಲ್ಲದೆ ಬಿಕೋ ಅನ್ನುತ್ತಿತ್ತು. ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಓಡಾಟ ಸ್ಥಗಿತಗೊಳಿಸಿತ್ತು. ಪುತ್ತೂರಿನ ವಾರದ ಸಂತೆಯು ಎಂದಿನಂತೆ ನಡೆಯಿತಾದರೂ ಸಂತೆಯಲ್ಲಿ ಜನ ಸಂಖ್ಯೆ ಕಡಿಮೆಯಾಗಿತ್ತು.
ಗ್ರಾಮೀಣ ಪ್ರದೇಶಗಳಲ್ಲಿ ಅಂಶಿಕ ಪ್ರತಿಕ್ರಿಯೆ: ಪುತ್ತೂರಿನ ಗ್ರಾಮೀಣ ಪ್ರದೇಶವಾಗಿರುವ ಕುಂಬ್ರ, ಮಾಡಾವು, ಪಾಣಾಜೆ, ತಿಂಗಳಾಡಿ, ಪೆರ್ಲಂಪಾಡಿ, ಈಶ್ವರಮಂಗಲ ಇನ್ನಿತರ ಕಡೆಗಳಲ್ಲಿ ಬಂದ್‌ಗೆ ಯಾವುದೇ ಬೆಂಬಲ ಕಂಡು ಬಂದಿಲ್ಲ. ಇಲ್ಲಿನ ಎಲ್ಲಾ ಅಂಗಡಿಗಳು ಹಾಗೂ ಇನ್ನಿತರ ಮಳಿಗೆಗಳು ಎಂದಿನಂತೆ ತೆರೆದುಕೊಂಡು ವ್ಯಾಪಾರ ನಡೆಸುತ್ತಿದ್ದವು. ನೆಲ್ಯಾಡಿ, ಕಡಬ, ಉಪ್ಪಿನಂಗಡಿಯಲ್ಲಿ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಹೊನಲು ಬೆಳಕಿನ ಕೋಟಿಚೆನ್ನಯ ಜೋಡುಕರೆ ಕಂಬಳವು ಶನಿವಾರ ರಾತ್ರಿ ನಡೆದಿದ್ದು, ಕಂಬಳಕ್ಕೆ ಆಗಮಿಸಿದ ಹಲವಾರು ಮಂದಿ ಮನೆಗೆ ತೆರಳಲು ಬಸ್‌ಗಳಿಲ್ಲದೆ ಪರದಾಡುವಂತಾಯಿತು.