ಬಂಟ್ವಾಳದಲ್ಲಿ ಬಸ್‌ಗೆ ಕಲ್ಲು
ಬಂಟ್ವಾಳ: ಎತ್ತಿನಹೊಳೆ ಯೋಜನೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಬಂದ್‌ಗೆ ಬಂಟ್ವಾಳ ತಾಲೂಕಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಬಂಟ್ವಾಳ, ಬಿ.ಸಿ. ರೋಡ್, ಮೆಲ್ಕಾರ್, ಕಲ್ಲಡ್ಕ, ಮೂರ್ಜೆ, ಪುಂಜಾಲಕಟ್ಟೆ, ವಾಮದಪದವು, ಸಿದ್ದಕಟ್ಟೆ, ರಾಯಿ, ವಿಟ್ಲಗಳಲ್ಲಿ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಿ ಬಂದ್ ಆಚರಿಸಿದ್ದರೆ, ಖಾಸಗಿ, ಸರ್ಕಾರಿ ಬಸ್‌ಗಳು ಸಹಿತ ಟೂರಿಸ್ಟ್ ವಾಹನಗಳು, ಆಟೋಗಳು ರಸ್ತೆಗಿಳಿಯದಿದ್ದುದರಿಂದ ಜನಸಾಮಾನ್ಯರು ಪರದಾಡುವಂತಾಯಿತು. ಆದರೆ ಬೆರಳೆಣಿಕೆಯ ಆಟೋ, ಟೂರಿಸ್ಟ್ ಕಾರುಗಳು ಸಂಚರಿಸುತ್ತಿದ್ದವು.
ಬಸ್‌ಗೆ ಕಲ್ಲು ತೂರಾಟ: ಬೆಳಗ್ಗಿನ ಹೊತ್ತು ಜಕ್ರಿಬೆಟ್ಟುನಲ್ಲಿ ಟಯರ್‌ಗೆ ಬೆಂಕಿ ಕೊಟ್ಟು ಸಂಚಾರಕ್ಕೆ ತಡೆ ಉಂಟು ಮಾಡಲಾಗಿತ್ತು. ಪೊಲೀಸರು ಸ್ಥಳಕ್ಕೆ ತೆರಳಿ ಬೆಂಕಿ ಹತ್ತಿದ್ದ ಟಯರನ್ನು ರಸ್ತೆ ಮಧ್ಯದಿಂದ ತೆರವುಗೊಳಿಸಿದರು. ಕಲ್ಲಡ್ಕ ಬಳಿ ಕೆಎಸ್‌ಆರ್‌ಟಿಸಿ ಬಸ್‌ವೊಂದಕ್ಕೆ ಕಲ್ಲು ತೂರಿದ್ದು ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಎರಡು ಕಲ್ಯಾಣ ಮಂಟಪಗಳಲ್ಲಿ ವಿವಾಹ ಸಮಾರಂಭವಿದ್ದು, ಪಾಲ್ಗೊಂಡವರ ಸಂಖ್ಯೆ ವಿರಳವಾಗಿತ್ತು.
ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಅರಿವು ಪಚ್ಚೆ ಬಳಗ, ರಂಗ ಸಾಂಗತ್ಯ ಮಣಿನಾಲ್ಕೂರು, ಆಟಕೂಟ ತುಳುನಾಡು ಪದ್ಮುಂಜ ಬಳಗದ ಪದಾಧಿಕಾರಿಗಳು ಬಿ.ಸಿ.ರೋಡ್ ಮೇಲ್ಸೇತುವೆ ಅಡಿಯಲ್ಲಿ ಯೋಜನೆಗೆ ಸಂಬಂಧಿಸಿ ಪರ- ವಿರೋಧ ಚರ್ಚೆಯಾದ ಮತ್ತು ಬಂದ್‌ಗೆ ಕರೆ ನೀಡಿದ ಕುರಿತ ಪತ್ರಿಕಾ ತುಣುಕುಗಳನ್ನು ಪ್ರದರ್ಶಿಸಿ, ಕರಪತ್ರಗಳನ್ನು ಹಂಚಿದರು.