ಕೋಲಾರ ಉಸ್ತುವಾರಿ ಸ್ಥಾನಕ್ಕೆ ರಾಜಿನಾಮೆ ನೀಡಿ
ಮಂಗಳೂರು: ದ.ಕ ಜಿಲ್ಲೆಯಲ್ಲಿ ರಾಜಕೀಯವಾಗಿ ಮೇಲೆಬಂದ ಆರೋಗ್ಯ ಸಚಿವ ಯು.ಟಿ.ಖಾದರ್ ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಇಬ್ಬಗೆಯ ನಿಲುವು ತಳೆದಿದ್ದಾರೆ. ಆದ್ದರಿಂದ ಅವರು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವಂತೆ ಕರಾವಳಿ ಜೀವನದಿ ನೇತ್ರಾವತಿ ಸಂರಕ್ಷಣಾ ಸಮಿತಿ ಉಪಾಧ್ಯಕ್ಷ ಎಂ.ಜಿ. ಹೆಗಡೆ ಆಗ್ರಹಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರ ಜೀವನದಿ ನೇತ್ರಾವತಿ ಬಗ್ಗೆ ಸಚಿವ ಖಾದರ್ ಖಡಕ್ ನಿಲುವು ವ್ಯಕ್ತಪಡಿಸಿಲ್ಲ, ಜಿಲ್ಲೆಯ ಪರವಾಗಿ ಮಾತನಾಡಿಲ್ಲ. ಇದೇ ವರ್ತನೆ ಮುಂದುವರಿಸಿದರೆ ಮುಂದೆ ಜಿಲ್ಲೆಯಲ್ಲಿ ನಿಮ್ಮ ರಾಜಕೀಯ ನಡೆಯಲು ಜನರು ಬಿಡಲಾರರು. ಆದ್ದರಿಂದ ಎರಡು ದೋಣಿಯಲ್ಲಿರುವ ಬದಲು ಕೋಲಾರ ಉಸ್ತುವಾರಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಡೀವಿ, ಮೊಯ್ಲಿಗೆ ಘೇರಾವ್: ಜಿಲ್ಲೆಯ ಹಿತಾಸಕ್ತಿಗೆ ವಿರುದ್ಧವಾಗಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರನ್ನು ಯಾವುದೇ ಕಾರ್ಯಕ್ರಮಕ್ಕೆ ಕರೆಯಬಾರದು. ಒಂದು ವೇಳೆ ಜಿಲ್ಲೆಗೆ ಆಗಮಿಸಿದರೆ ಅವರ ವಿರುದ್ಧ ಕಪ್ಪುಬಾವುಟ ಹಿಡಿದು ಪ್ರತಿಭಟನೆ ನಡೆಸುವುದಾಗಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ರಾಜ್ಯಾಧ್ಯಕ್ಷ ದಿನಕರ ಶೆಟ್ಟಿ ತಿಳಿಸಿದರು.
ಕಾನೂನು ಹೋರಾಟ: ಎತ್ತಿನಹೊಳೆ ಯೋಜನೆಗೆ ಜಿಲ್ಲೆಯ ವಿರೋಧ ಹೊರತೂ ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಸಾಧಕ ಬಾಧಕ ಚರ್ಚಿಸದೆ ತರಾತುರಿಯಲ್ಲಿ ರಾಜಕೀಯ ಲಾಭಕ್ಕಾಗಿ ಯೋಜನೆ ಜಾರಿಗೊಳಿಸುತ್ತಿದ್ದಾರೆ. ಈ ಯೋಜನೆ ಸ್ಥಗಿತಗೊಳಿಸುವ ವರೆಗೆ ಹೋರಾಟ ಮುಂದುವರಿಯುವುದು. ಈಗಾಗಲೇ ಹೈಕೋರ್ಟ್‌ನಲ್ಲಿ ರಿಟ್ ದಾಖಲಿಸಲು ಸಿದ್ಧತೆ ನಡೆಯುತ್ತಿದೆ. ಇದನ್ನು ಕರ್ನಾಟಕ ನೀರಾವರಿ ಅಭಿವೃದ್ಧಿ ನಿಗಮಕ್ಕೆ ನೀಡಿದ್ದು, ನಿಗಮ ಸಣ್ಣ ನೀರಾವರಿ ಕಾಮಗಾರಿ ಮಾತ್ರ ನಡೆಸುವ ಅಧಿಕಾರ ಹೊಂದಿದೆ. ಅಲ್ಲದೆ ಕಾರ್ಯಸಾಧ್ಯತಾ ಬೋಗಸ್ ಪಟ್ಟಿಯನ್ನು ತಯಾರಿಸಲಾಗಿದೆ. ವರಾಹಿ, ಕೃಷ್ಣಾಮೇಲ್ದಂಡೆ ಯೋಜನೆ, ಮಹದಾಯಿ ಯೋಜನೆಯಂತೆ ಎತ್ತಿನಹೊಳೆಯೂ ಹಳ್ಳ ಹಿಡಿಯಲಿದೆ ಎಂದು ಸಮಿತಿ ಅಧ್ಯಕ್ಷ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಹೇಳಿದರು.