ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಆರ್‌ಟಿಇ ಲಾಟರಿ ಆಯ್ಕೆ ವೇಳೆ ವಂಚನೆ ಆರೋಪ

Mainashree
Updated On : 6 Mar 2014, 11:17 am

ಸುಳ್ಯ: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)ಯಡಿ ಖಾಸಗಿ ಶಾಲೆಗಳಲ್ಲಿ ಶೇ.25ರಷ್ಟು ಸರ್ಕಾರಿ ಕೋಟಾ ಭರ್ತಿ ಮಾಡಲು ತಾತ್ಕಾಲಿಕ ಪಟ್ಟಿ ಪ್ರಕಟವಾಗಿದ್ದು, ಲಾಟರಿ ಮೂಲಕ ಆಯ್ಕೆ ಮಾಡಿದ ಕ್ರಮಕ್ಕೆ ಸುಳ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸುಳ್ಯ ತಾಲೂಕಿನ ವಿವಿಧ ಶಾಲೆಗಳಲ್ಲಿ ಒಟ್ಟು 86 ಸೀಟ್‌ಗಳು ಈ ಕಾಯ್ದೆಯ ಪ್ರಕಾರ ಮೀಸಲಿದ್ದು, ಕಳೆದ ಬಾರಿ ಇದು ಭರ್ತಿಯಾಗಿರಲಿಲ್ಲ. ಆದರೆ ಈ ಬಾರಿ ಸಾಕಷ್ಟು ಪ್ರಚಾರ ನೀಡಿದ್ದರಿಂದ ನಿರೀಕ್ಷೆಗೂ ಮೀರಿ ಅರ್ಜಿಗಳು ಬಂದಿದ್ದವು. ಹಾಗಾಗಿ ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ.
ವಂಚನೆ ಆರೋಪ: ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಭರ್ತಿಯಾದ ಬಳಿಕ ಉಳಿಕೆ ಸೀಟ್‌ಗಳನ್ನು ನೆರೆಹೊರೆಯವರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ನೀಡಬೇಕು ಎಂಬ ನಿಯಮವಿದೆ. ಆದರೆ ರು. 1 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ ಮೊದಲ ಆದ್ಯತೆಯಲ್ಲಿ ಲಾಟರಿ ಆಯ್ಕೆ ನಡೆಸಲಾಗಿದೆ. ಆದರೆ ಸಾಕಷ್ಟು ಆದಾಯ ಇರುವವರು ಕಡಿಮೆ ಆದಾಯ ದೃಢಪತ್ರ ಹಾಜರುಪಡಿಸಿ ಅರ್ಹ ಬಡವರಿಗೆ ವಂಚನೆ ಮಾಡಿದ್ದಾರೆ ಎಂದು ನೊಂದವರು ಶಾಸಕ ಹಾಗೂ ತಾಲೂಕು ಪಂಚಾಯಿತಿ ಅಧ್ಯಕ್ಷರಿಗೆ ದೂರು ನೀಡಿದ್ದಾರೆ.
ಬೊಲೆರೋ ಕಾರು ಹೊಂದಿರುವ ವ್ಯಕ್ತಿಯೊಬ್ಬರು ಕಾರಿನಲ್ಲಿಯೇ ಬಂದು ಅರ್ಜಿ ಹಾಕಿದ್ದಾರೆ. ಅವರ ಮಕ್ಕಳಿಗೆ ಅವಕಾಶ ಸಿಕ್ಕಿದೆ. ಕಾಲೇಜಿನ ಪ್ರೊಫೆಸರ್ ಒಬ್ಬರ ಮಗನಿಗೂ ಅವಕಾಶ ಸಿಕ್ಕಿದೆ. ಆದರೆ ಬಿಪಿಎಲ್ ಕಾರ್ಡ್ ಹೊಂದಿರುವ ತನ್ನ ಮಗನಿಗೆ ಅವಕಾಶ ಸಿಗಲಿಲ್ಲ ಎಂದು ಬಾಲಕೃಷ್ಣ ಎಂಬವರು ಪತ್ರಿಕೆಗೆ ದೂರು ನೀಡಿದ್ದಾರೆ.
ದೂರು ಸಲ್ಲಿಕೆಗೆ ಅವಕಾಶ: ಶಾಲೆ ಮಟ್ಟದಲ್ಲಿಯೇ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಸರ್ಕಾರದ ನಿಯಮದಂತೆ ಆಯ್ಕೆ ನಡೆಯುತ್ತದೆ. ಲಾಟರಿ ಮೂಲಕ ಆಯ್ಕೆ ಮಾಡುವಂತೆ ಸರ್ಕಾರಿ ಅದೇಶ ಇದೆ. ಅಲ್ಲದೆ ಸಾರ್ವಜನಿಕರ, ಪೋಷಕರ ಸಮ್ಮುಖವೇ ಲಾಟರಿ ಎತ್ತಲಾಗುತ್ತದೆ. ಆದಾಯ ದೃಢಪತ್ರ ನೀಡುವುದು ಕಂದಾಯ ಇಲಾಖೆ. ಅವರು ನೀಡಿದ ದಾಖಲೆಯನ್ನು ನಾವು ಅಂಗೀಕರಿಸಬೇಕಿದೆ. ಹಾಗಿದ್ದೂ ಪಟ್ಟಿಯಲ್ಲಿ ಅನರ್ಹರು ಸೇರಿದ್ದರೆ ದೂರು ಸಲ್ಲಿಸಲು ಮೂರು ದಿನಗಳ ಅವಕಾಶವಿದೆ. ದಾಖಲೆ ಸಮೇತ ದೂರು ನೀಡಿದರೆ, ಅದನ್ನು ತನಿಖೆ ನಡೆಸಲಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement