ನ್ಯಾಯಾಂಗ ನಿಂದನೆ ಆರೋಪ; ಬೈಂದೂರು ಎಸ್ಐ ಅಮಾನತು
ಬೆಂಗಳೂರು: ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿಯನ್ನು ಕಾನೂನು ಬಾಹಿರವಾಗಿ ಬಿಡುಗಡೆ ಮಾಡಿದ ಆರೋಪ ಎದುರಿಸುತ್ತಿರುವ ಸುಳ್ಯ ತಾಲೂಕಿನ ಬೈಂದೂರು ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಅಮಾನತುಗೊಳಿಸಿರುವುದಾಗಿ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.
ಆರೋಪಿ ವಕೀಲ ಕೇಶವಭಟ್ ಜಾಮೀನು ನಿರಾಕರಣೆಯಾಗಿದ್ದರೂ, ತಮ್ಮ ವೈಯಕ್ತಿಕ ಭದ್ರತೆ ಆಧಾರದ ಮೇಲೆ ಜಾಮೀನು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಸುನಿಲ್ಕುಮಾರ್ ಅವರನ್ನು ಅಮಾನತು ಮಾಡುವಂತೆ ನ್ಯಾಯಪೀಠ ನೀಡಿದ್ದ ಆದೇಶ ಪಾಲಿಸಿರುವುದಾಗಿ ಸರ್ಕಾರ ಹೇಳಿಕೆ ನೀಡಿದೆ. ಇದನ್ನು ಪರಿಗಣಿಸಿದ ನ್ಯಾ. ಎಸ್.ಎನ್.ಸತ್ಯನಾರಾಯಣ ಅವರಿದ್ದ ಏಕಸದಸ್ಯ ಪೀಠ, ವಿಚಾರಣೆ ಮುಂದೂಡಿದೆ.
ಈ ನಡುವೆ, ಆರೋಪಿ ತಲೆಮರೆಸಿಕೊಂಡಿದ್ದು, ತನ್ನ ಪರವಾಗಿ ವಾದ ಮಂಡಿಸಲು ವಕೀಲರನ್ನು ನಿಯೋಜಿಸಿದ್ದಾರೆ. ಆದ್ದರಿಂದ ಆರೋಪಿಗೆ ಖುದ್ದು ಹಾಜರಾಗುವಂತೆ ಆದೇಶಿಸಬೇಕು ಎಂದು ಅರ್ಜಿದಾರ ಪರ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿದರು. ನಕಲಿ ಛಾಪಾ ಕಾಗದ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ವಕೀಲ ಕೇಶವಭಟ್ಗೆ ಜಾಮೀನು ನೀಡಲು ಅಧೀನ ನ್ಯಾಯಾಲಯ ಹಾಗೂ ಹೈಕೋರ್ಟ್ ನಿರಾಕರಿಸಿತ್ತು. ಇಷ್ಟರ ನಂತರವೂ ಸಬ್ ಇನ್ಸ್ಪೆಕ್ಟರ್ ಸುನಿಲ್ಕುಮಾರ್, 2011ರ ಜೂ.6 ರಂದು ಕೇಶವ ಭಟ್ರನ್ನು ಬಿಡುಗಡೆಗೊಳಿಸಿದ್ದರು.