ಬಾಲಕಿಯೊಂದಿಗೆ ಪ್ರಯಾಣ: ಯುವಕನ ಮೇಲೆ ತಂಡ ಹಲ್ಲೆ
ಸುಳ್ಯ: ಸುಳ್ಯದ ಕಾಲೇಜಿಗೆ ಹೋಗುವ ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಅನ್ಯಕೋಮಿನ ಯುವಕನ ಮೇಲೆ ಯುವಕರ ತಂಡ ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರ ಸುಳ್ಯದಲ್ಲಿ ನಡೆದಿದೆ. ಜಯನಗರದ ಅನ್ಯಕೋಮಿನ ಯುವಕನೋರ್ವ ಕಾಲೇಜೊಂದರ ವಿದ್ಯಾರ್ಥಿನಿಯೊಂದಿಗೆ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಕುರುಂಜಿಭಾಗ್‌ನಲ್ಲಿ ಯುವಕರ ತಂಡ ತಡೆದು ನಿಲ್ಲಿಸಿ ಆತನ ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ಯುವತಿಯ ಫೋಟೋ ಹಾಗೂ ಇತರ ಯುವತಿಯರ ಫೋಟೋ ಇತ್ತೆನ್ನಲಾಗಿದೆ. ಈ ಕುರಿತು ವಿಚಾರಿಸಿದಾಗ ಆತ ಸರಿಯಾದ ಮಾಹಿತಿ ನೀಡದೆ ಇದ್ದುದರಿಂದ ಆತನ ಮೇಲೆ ಹಲ್ಲೆ ನಡೆಸಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ಯುವಕನ ತಂದೆಯನ್ನು ಕರೆದು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ಘಟನೆ ಕುರಿತು ಯಾರೂ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.