ಮಗನ ಶಂಕಾಸ್ಪದ ಅಪಹರಣ: ತಾಯಿ ದೂರು
ಉಪ್ಪಿನಂಗಡಿ: ಕೆಲಸಕ್ಕೆಂದು ಕರೆದೊಯ್ಯಲ್ಪಟ್ಟ ಮಗನನ್ನು ಅಪಹರಣ ಮಾಡಿರುವ ಶಂಕೆ ಮೂಡಿದೆ ಎಂದು ಅಪಹರಣಗೊಂಡ ವ್ಯಕ್ತಿ ತಾಯಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಅಂಡೆತಡ್ಕ ಮನೆ ನಿವಾಸಿ, ಝೋಹರಾ, ತನ್ನ ಮಗ ಮಹಮ್ಮದ್ ನಜೀಬುದ್ದೀನ್‌ನನ್ನು, ಪೊಲೀಸರು ಪತ್ತೆ ಹಚ್ಚಿಕೊಡಬೇಕೆಂದು ಆಗ್ರಹಿಸಿದ್ದಾರೆ. ಸುಮಾರು ನಾಲ್ಕು ತಿಂಗಳ ಹಿಂದೆ ಕೆಲಸ ದೊರಕಿಸಿಕೊಡುತ್ತೇನೆಂದು ನಜೀಬುದ್ದೀನ್‌ನನ್ನು ಕರೆದೊಯ್ದ ವ್ಯಕ್ತಿ ಇದೀಗ ಊರಿಗೆ ಬಂದಿದ್ದು, ತನ್ನ ಮಗ ಎಲ್ಲಿದ್ದಾನೆಂದು ಕೇಳಿದರೆ ಅವನನ್ನು ಬೇರೆಯವರ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಸಿದ್ದೇನೆಂದು ಉತ್ತರಿಸಿದ್ದನೆನ್ನಲಾಗಿದೆ. ಅವರು ಹೇಳುತ್ತಿರುವ ಅಂಗಡಿಗೆ ಪೋನಾಯಿಸಿದರೆ ಆತ ನಜಿಬುದ್ದೀನ್ ತಮ್ಮಲ್ಲಿಯೇ ಇದ್ದಾನೆಂದು ತಿಳೀಸುತ್ತಾನೆಯೇ ವಿನಹ ಆತನಿಗೆ ಪೋನ್ ನೀಡುತ್ತಿರಲಿಲ್ಲವೆನ್ನಲಾಗಿದೆ.
ಬೋಳಂತೂರು ದಾಳಿ ಪೂರ್ವಯೋಚಿತ: ಶಾಫಿ
ಬಂಟ್ವಾಳ: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್‌ನ ಬೋಳಂತೂರು ಘಟಕದ ಆಶ್ರಯದಲ್ಲಿ ಮಾ.2ರಂದು ಬೋಳಂತೂರಿನ ಕಲ್ಪನೆ ಎಂಬಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದ ವೇಳೆ ಸುನ್ನಿ ಗುಂಪಿಗೆ ಸೇರಿದ ತಂಡವೊಂದು ನಡೆಸಿರುವ ದಾಳಿ ಪೂರ್ವಯೋಚಿತ ಕೃತ್ಯ ಎಂದು ಮೂವ್‌ಮೆಂಟಿನ ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ ಆರೋಪಿಸಿದ್ದಾರೆ. ಬುಧವಾರ ಸಂಜೆ ಬಿ.ಸಿ.ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಾಳಿಕೋರರ ಮೇಲೆ ತಮ್ಮ ಕಾರ್ಯಕರ್ತರು ಯಾವುದೇ ಪ್ರತಿದಾಳಿ ನಡೆಸಿಲ್ಲವಾದರೂ ವಿಟ್ಲ ಪೊಲೀಸ್ ಠಾಣೆಯಲ್ಲಿ ಇತ್ತಂಡಗಳ ವಿರುದ್ಧ ದೂರು ಪ್ರತಿದೂರನ್ನು ದಾಖಲಿಸಿಕೊಂಡಿದ್ದಾರೆ. ಪೊಲೀಸರು ಘಟನೆಯ ಬಗ್ಗೆ ನ್ಯಾಯಯುತ ತನಿಖೆ ನಡೆಸುವ ವಿಶ್ವಾಸವಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮೂವ್‌ಮೆಂಟಿನ ಪದಾಧಿಕಾರಿಗಳಾದ ಅಬ್ದುಲ್ ರವುಫ್, ರಿಯಾಜ್ ಅಹಮದ್, ನಜೀರ್ ಅಹಮ್ಮದ್ ಮೊದಲಾದವರಿದ್ದರು.