ಆಕಾಶವಾಣಿ ಗಣ್ಯರ ಸೃಷ್ಟಿಸಿದೆ: ಸಚಿವ ರೈ
ಮಂಗಳೂರು: ಸಾಹಿತಿ, ಕಲಾವಿದರು, ಸಾಂಸ್ಕೃತಿಕ ಕ್ಷೇತ್ರದ ಗಣ್ಯರನ್ನು ಬೆಳೆಸಿದ ಕೀರ್ತಿ ಮಂಗಳೂರು ಆಕಾಶವಾಣಿಗೆ ಸಲ್ಲುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಗುರುವಾರ ಮಂಗಳೂರು ಆಕಾಶವಾಣಿ ಮನರಂಜನಾ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಲವಾರು ಮಾಧ್ಯಮಗಳ ಪೈಪೋಟಿಯ ಮಧ್ಯೆಯೂ ಆಕಾಶವಾಣಿ ತನ್ನತನ ಉಳಿಸಿಕೊಂಡಿದೆ. ಜನರಿಗಾಗಿ, ಜನರಿಗೋಸ್ಕರ ಇರುವ ಮಾಧ್ಯಮದ ಸಿಬ್ಬಂದಿ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಲಿ ಎಂದರು.
ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮಾತನಾಡಿ, ಆಕಾಶವಾಣಿಯಲ್ಲಿ ಹೊಸ ಕಾರ್ಯಕ್ರಮಗಳು ಮೂಡಿಬರುತ್ತಿದ್ದು, ಸರ್ಕಾರದ ಅನೇಕ ಯೋಜನೆಗಳನ್ನು ಜನರ ಬಳಿ ತಲುಪಿಸುವ ಕಾರ್ಯ ಮಾಡುತ್ತಿದೆ. ನೇರ ಪ್ರಸಾರದ ಮೂಲಕ ಆ ಕ್ಷಣದ ಸುದ್ದಿಯನ್ನು, ಕಾರ್ಯಕ್ರಮಗಳನ್ನು ಜನರನ್ನು ಬಹುಬೇಗ ತಲುಪಿಸುವ ಕಾರ್ಯದಲ್ಲಿ ಸಿಬ್ಬಂದಿ ಸಹಕಾರ ಅದ್ಭುತ ಎಂದರು.
ಆಕಾಶವಾಣಿಯ 'ಎ' ಶ್ರೇಣಿ ಕಲಾವಿದರಾದ ನಾಗೇಶ ಎ ಬಪ್ಪನಾಡು ಹಾಗೂ ಮಂಗಳೂರು ಆಕಾಶವಾಣಿ ನಿವೃತ್ತ ಹಿರಿಯ ಉದ್ಘೋಷಕ ಮುದ್ದು ಮೂಡುಬೆಳ್ಳೆ ಅವರನ್ನು ಗೌರವಿಸಲಾಯಿತು. ನಂತರ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆಕಾಶವಾಣಿ ನಿಲಯ ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಕೆ. ಅಶೋಕ ಸ್ವಾಗತಿಸಿದರು. ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಸದಾನಂದ ಹೊಳ್ಳ ವಂದಿಸಿದರು. ಡಾ. ಶರಭೇಂದ್ರ ಸ್ವಾಮಿ, ಕಾನ್ಸೆಪ್ಟಾ ಫೆರ್ನಾಂಡಿಸ್, ಜೇಮ್ಸ್ ಫೆರ್ನಾಂಡಿಸ್ ಇದ್ದರು.