ಕಾರ್ಕಳ: ಅನುಷ್ಠಾನಗೊಳ್ಳದ ನೀತಿ ಸಂಹಿತೆ
ಕಾರ್ಕಳ: ದೇಶವ್ಯಾಪಿ ಚುನಾವಣಾ ನೀತಿ ಸಂಹಿತೆ ಜಾರಿಗೊಂಡಿದ್ದರೂ ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಇನ್ನೂ ಅನುಷ್ಠಾನಗೊಂಡಂತಿಲ್ಲ.
ದೇಶದ ಭಾವಿ ಪ್ರಧಾನಿಗಳೆಂದೇ ಬಿಂಬಿತರಾಗಿರುವ ನರೇಂದ್ರ ಮೋದಿ, ರಾಹುಲ್‌ಗಾಂಧಿ ಪರ ಬ್ಯಾನರ್, ಕಟೌಟ್‌ಗಳು ಹಾಗೂ ಸರ್ಕಾರ ಸಾಧನೆಯ ಪ್ರಚಾರ ಫಲಕಗಳು ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ರಾರಾಜಿಸುತ್ತಿತ್ತಿವೆ.
ಕಳೆದ ಕೆಲ ತಿಂಗಳ ಹಿಂದೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ನೀಡಿರುವ ಮಾಹಿತಿಯನ್ವಯ ಜಿಲ್ಲಾಧಿಕಾರಿ ಆದೇಶವೊಂದನ್ನು ಹೊರಡಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಇರುವ ರಾಜಕೀಯ ಪ್ರೇರಿತ ಬಂಟಿಂಗ್ಸ್, ಬ್ಯಾನರ್, ಕಟೌಟ್‌ಗಳನ್ನು ತೆರವುಗೊಳಿಸಬೇಕು. ಇದರಿಂದ ರಾಜಕೀಯ ಹಾಗೂ ಧಾರ್ಮಿಕ ಅಹಿತಕಾರಿ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದೆ ಎಂಬ ಸ್ಪಷ್ಟ ಸಂದೇಶವನ್ನು ಉಡುಪಿ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿದ್ದರು.
ಜಿಲ್ಲಾಧಿಕಾರಿ ಆದೇಶಕ್ಕೆ ಬೆಲೆ ನೀಡದೆ ಇದ್ದುದರಿಂದ ಬ್ಯಾನರ್, ಕಟೌಟ್‌ಗಳು ಯಥಾಸ್ಥಿತಿಯಲ್ಲಿ ಕಂಡುಬಂದಿವೆ. ಇದರ ಬೆನ್ನಲ್ಲೇ ಕೆಲ ಬಂಟಿಂಗ್ಸ್‌ಗಳು ಹಾನಿಗೊಳಗಾಗಿದ್ದು, ಪರಿಸ್ಥಿತಿ ಹದಗೆಡಲು ಕಾರಣವಾಗಿತ್ತು. ಬಂಟಿಂಗ್ಸ್ ಹಾನಿಗೊಳಿಸಿದ ದುಷ್ಕರ್ಮಿಗಳ ಆತ್ಮಕ್ಕೆ ಚಿರಶಾಂತಿ ಕೋರುವ ವಿನೂತನ ಬ್ಯಾನರ್‌ಗಳು ಕೆಲವೆಡೆ ಕಂಡುಬಂದಿರುವುದು ಮಾಧ್ಯಮಗಳಿಗೆ ಸುದ್ದಿಯಾಯಿತೇ ಹೊರತು ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸಾಧ್ಯವಾಗಲಿಲ್ಲ.
ಇದೀಗ ನೀತಿ ಸಂಹಿತೆ ಜಾರಿಗೊಂಡಿದ್ದರೂ, ಎಲ್ಲೆಡೆ ರಾರಾಜಿಸುತ್ತಿರುವ ರಾಜಕೀಯ ನಾಯಕರ ಭಾವಚಿತ್ರ ಇರುವ ಫಲಕಗಳನ್ನು ತೆಗೆಸಲು ಕ್ರಮ ಕೈಗೊಳ್ಳಬೇಕಾಗಿದೆ.