ಉಪ್ಪಿನಂಗಡಿ: ಸಂಭ್ರಮದ ಮಹಾಕಾಳಿ ಮೆಚ್ಚಿ
ಉಪ್ಪಿನಂಗಡಿ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಮಹಾಕಾಳಿ ಮೆಚ್ಚಿಯು ಶುಕ್ರವಾರ ರಾತ್ರಿ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.
ಮೆಚ್ಚಿಯ ಪಾರಂಪರಿಕ ವಿಧಿ ವಿಧಾನಗಳು ಪರಂಪರಾಗತವಾಗಿ ನಡೆಸಿಕೊಂಡು ಬರುತ್ತಿರುವ ನಲಿಕೆ ಮನೆತನದ ಮಂದಿಯಿಂದ ನೆರವೇರಿಸಲ್ಪಟ್ಟಿತ್ತು. ದೇಗುಲದ ಸಂತೆ ಮಜಲಿನಲ್ಲಿ ಅಣಿ ಕಟ್ಟಿ ನರ್ತನ ನಡೆದರೆ, ರಕ್ತ ಬೀಜಾಸುರರನ್ನು ಸಂಹರಿಸಿದ ದ್ಯೋತ್ಯಕವಾಗಿ ದೇವಿಯು ನಾಲಿಗೆ ಹೊರ ಚಾಚುವ ದೃಶ್ಯವೂ ಅನಾವರಣಗೊಂಡಿತು.
ಮೆಚ್ಚಿಯ ಅಂಗವಾಗಿ ಬಾಲಕೃಷ್ಣ ಮಂಜೇಶ್ವರ ಅವರ ಶಿಷ್ಯವೃಂದದವರಿಂದ ವೈವಿಧ್ಯಮಯ ಭರತನಾಟ್ಯಗಳ ನೃತ್ಯಾಭಿಷೇಕಂ ಹಾಗೂ ದುರ್ಗಾ ಮ್ಯೂಸಿಕಲ್ಸ್ ಉಜಿರೆ ಅವರ ಭಕ್ತಿ ಸೌರಭ ವೀಕ್ಷಕರ ಮನಗೆದ್ದಿತ್ತು. ಮೆಚ್ಚಿಯ ಅಂಗವಾಗಿ ಸಾವಿರಾರು ಜನರಿಗೆ ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಿತು.
ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಕಾರ್ಯನಿರ್ವಹಣಾಧಿಕಾರಿಗಳಾದ ಜಯಮ್ಮ, ಸಮಿತಿ ಸದಸ್ಯರಾದ ಸಚಿನ್ ಸುಂದರ ಗೌಡ, ಹರಿರಾಮಚಂದ್ರ , ಕಂಗ್ವೆ ವಿಶ್ವನಾಥ ಶೆಟ್ಟಿ, ಧನ್ಯಕುಮಾರ್ ರೈ, ಉಷಾ ಮುಳಿಯ, ಜ್ಯೋತಿ ಹೇರಂಭ ಶಾಸ್ತ್ರಿ ಹಾಗೂ ಉತ್ಸವ ಸಮಿತಿಯ ಪದಾಧಿಕಾರಿಗಳು ಇದ್ದರು.