ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಲ್ಲಡ್ಕ: ಕಾಂಗ್ರೆಸ್ ಸಭೆಯಲ್ಲಿ ದಾಂದಲೆ, ಉದ್ವಿಗ್ನ

Lingaraj Badiger
Updated On : 9 Mar 2014, 11:26 am

ಬಂಟ್ವಾಳ: ಅತಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಕಲ್ಲಡ್ಕದಲ್ಲಿ ಶನಿವಾರ ಸಂಜೆ ನಡೆದ ಕಾಂಗ್ರೆಸ್ ಸಾಮರಸ್ಯ ಸಭೆಯಲ್ಲಿ ಜಿ.ಪಂ. ಸದಸ್ಯರೊಬ್ಬರ ಮಾತಿಗೆ ಆಕ್ಷೇಪಿಸಿ ಯುವಕರ ತಂಡವೊಂದು ದಾಂದಲೆ ನಡೆಸಿದ್ದು, ಪರಿಸರದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.
ಉದ್ರಿಕ್ತ ಗುಂಪು ಸಭಿಕರ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ, ಬೈಕ್ ಹಾಗೂ ಕ್ವಾಲಿಸ್ ಕಾರಿಗೆ ಬೆಂಕಿ ಹಚ್ಚಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತು. ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿ ಚಾರ್ಜ್ ನಡೆಸಿದ್ದಾರೆ. ಪರಿಸರದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಕಲ್ಲೇಟಿನಿಂದ ಬಂಟ್ವಾಳ ನಗರ ಠಾಣೆಯ ಎಸ್‌ಐ ಸಂಜೀವ ಕುಮಾರ್ ಹಾಗೂ ಮೂವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ಅಲ್ಲದೆ ಹಲವು ಮಂದಿಗೆ ಗಾಯಗಳಾಗಿದ್ದು, ಅವರ ಹೆಸರು ತಿಳಿದುಬಂದಿಲ್ಲ. ಪೊಲೀಸ್ ವಾಹನಕ್ಕೂ ಕಲ್ಲು ತೂರಲಾಗಿದೆ.
ಘಟನೆ ವಿವರ: ಕಲ್ಲಡ್ಕ ಮೇಲಿನಪೇಟೆಯ ರಾಷ್ಟ್ರೀಯ ಹೆದ್ದಾರಿ ಪಕ್ಕವೇ ಪಾಣೆಮಂಗಳೂರು ಬ್ಲಾಕ್ ಮತ್ತು ಗೋಳ್ತಮಜಲು ವಲಯ ಕಾಂಗ್ರೆಸ್ ಜಂಟಿ ಆಶ್ರಯದಲ್ಲಿ ಸಾಮರಸ್ಯ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ, 'ಚುನಾವಣೆ ಬಂದಾಗಲೆಲ್ಲ ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳಿಗೆ ಹಿಂದೂಗಳ ನೆನಪಾಗಿ ಅಲ್ಲಲ್ಲಿ ಕೋಮುವಾದ ಬಿತ್ತುವ ಭಾಷಣ ಮಾಡುತ್ತಾರೆ. ಡಾ.ಪ್ರಭಾಕರ ಭಟ್ ಉಳಿದ ಸಮಯದಲ್ಲಿ ಬಡವರಿಗೆ, ಹಿಂದೂಗಳಿಗೆ ಯಾವುದೇ ರೀತಿಯ ಸಹಾಯ ಮಾಡುತ್ತಿಲ್ಲ' ಎಂದರು.
ಈ ಸಂದರ್ಭ ಯುವಕರ ತಂಡವೊಂದು ಏಕಾಏಕಿ ವೇದಿಕೆಯತ್ತ ಧಾವಿಸಿ ಬರಲು ಯತ್ನಿಸಿದಾಗ ಸ್ಥಳದಲ್ಲಿದ್ದ ಬಂಟ್ವಾಳ ಸಿಐ ತಡೆದರು. ಆಗ ಸಭೆಯಲ್ಲಿದ್ದ ಯುವಕರ ಗುಂಪು ಅವರತ್ತ ಮುನ್ನುಗ್ಗಿ ಹಲ್ಲೆಗೆ ಯತ್ನಿಸಿದ್ದು, ಪರಿಸ್ಥಿತಿ ಬಿಗಡಾಯಿಸಲಾರಂಭಿಸಿತು. ಈ ಹಂತದಲ್ಲಿ ವೇದಿಕೆಯಲ್ಲಿದ್ದ ಪಕ್ಷದ ಮುಖಂಡರು ಯುವಕರನ್ನು ಸಮಾಧಾನಪಡಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ.
ಕಲ್ಲು ತೂರಾಟ: ಇದೇ ವೇಳೆ ರಸ್ತೆಯಲ್ಲಿ ವಾಹನಗಳನ್ನು ತಡೆಹಿಡಿಯುವುದರೊಂದಿಗೆ ಪರಸ್ಪರ ಕಲ್ಲು ತೂರಾಟವೂ ಆರಂಭಗೊಂಡಿತು. ಈ ಹಂತದಲ್ಲಿ ಸಭಿಕರು ಚೆಲ್ಲಾಪಿಲ್ಲಿಯಾಗಿ ಓಡಲಾರಂಭಿಸಿದರು. ಕಲ್ಲು, ಬಾಟಲಿಗಳ ಪರಸ್ಪರ ತೂರಾಟ ನಡೆಯುತ್ತಲೇ ಇತ್ತು. ಸಭೆಯಲ್ಲಿದ್ದವರು ಕಲ್ಲೇಟಿನ ರಕ್ಷಣೆಗಾಗಿ ಕುಳಿತ ಕುರ್ಚ್‌ಯನ್ನೇ ತಲೆಗೆ ಅಡ್ಡ ಹಿಡಿದರು.
ಅಶ್ರುವಾಯು ಪ್ರಯೋಗ: ಪರಿಸ್ಥಿತಿ ತೀರ ವಿಕೋಪಕ್ಕೆ ತೆರಳಿದ್ದು, ಗುಂಪುಗಳ ಮಧ್ಯೆ  ದೊಣ್ಣೆ, ಮಾರಕಾಯುಧಗಳೊಂದಿಗೆ ಜಗಳ ಆರಂಭವಾಯಿತು. ಅಪಾಯದ ಮುನ್ಸೂಚನೆ ಅರಿತ ಪೋಲಿಸರು ಅಶ್ರುವಾಯು ಪ್ರಯೋಗಿಸಿ ಗುಂಪನ್ನು ಚದುರಿಸಿದರು. ಕಲ್ಲಡ್ಕ ರಸ್ತೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿ ಗುಂಪುಗಳನ್ನು ಬೆನ್ನಟ್ಟಿದರು.
ಬೈಕ್, ಕ್ವಾಲಿಸ್‌ಗೆ ಬೆಂಕಿ: ಈ ವೇಳೆ ಪಂಚವಟಿ ಬಳಿ ನಿಲ್ಲಿಸಿದ್ದ ಬೈಕ್‌ವೊಂದಕ್ಕೆ ಬೆಂಕಿ ಹಚ್ಚಲಾಗಿದ್ದು, ಇದರಿಂದ ಮತ್ತೆ ಪರಿಸ್ಥಿತಿ ಬಿಗಡಾಯಿಸಿತು. ತಕ್ಷಣ ಕಲ್ಲಡ್ಕ ಪರಿಸರದ ಎಲ್ಲ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಿದವು. ಬೈಕ್‌ಗೆ ಬೆಂಕಿ ಹಚ್ಚಿದ ಬೆನ್ನಲ್ಲೇ ಪರಿಸ್ಥಿತಿ ಉದ್ರಿಕ್ತಗೊಂಡು ಕ್ವಾಲಿಸ್ ವಾಹನವೊಂದಕ್ಕೆ ಬೆಂಕಿ ಹಚ್ಚಲಾಯಿತು. ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಎಸ್‌ಪಿ ಡಾ.ಶರಣಪ್ಪ ಸ್ಥಳಕ್ಕೆ ಆಗಮಿಸಿದರಲ್ಲದೆ, ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಬಿಗು ಬಂದೋಬಸ್ತು ಏರ್ಪಡಿಸಿದ್ದಾರೆ. ಗಲಭೆಗೆ ಕಾರಣರಾದ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಇದನ್ನು ಪೊಲೀಸರು ನಿರಾಕರಿಸಿದ್ದಾರೆ. ಗಲಭೆ ಬಗ್ಗೆ ಯಾವುದೇ  ಪ್ರಕರಣ ದಾಖಲಾಗಿಲ್ಲ. ಇದೀಗ ಪರಿಸ್ಥಿತಿ ಹತೋಟಿಯಲ್ಲಿದ್ದು, ಕಲ್ಲಡ್ಕ, ಮೆಲ್ಕಾರ್, ಬಿ.ಸಿ.ರೋಡ್ ಮೊದಲಾದೆಡೆ  ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಸಚಿವರ ಸಮ್ಮುಖದಲ್ಲಿ ಘರ್ಷಣೆ: ಕಾಂಗ್ರೆಸ್ ಸಭೆಯಲ್ಲಿ ಸಚಿವ ರಮಾನಾಥ ರೈ, ಪಕ್ಷದ ಮುಖಂಡರಾದ ಹರಿಕೃಷ್ಣ ಬಂಟ್ವಾಳ್, ಐವನ್ ಡಿಸೋಜ, ಹೇಮನಾಥ ಶೆಟ್ಟಿ, ಬಿ.ಎಚ್. ಖಾದರ್ ಮಾಯಿಲಪ್ಪ ಸಾಲಿಯಾನ್ ವೇದಿಕೆಯಲ್ಲಿದ್ದು ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement