ನೇತ್ರಾವತಿ ತಿರುವು, ಎತ್ತಿನ ಹೊಳೆ 'ಎಂಟಾಯರ್ಲಿ ಡಿಫರೆಂಟ್': ಡೀವಿ
ಪುತ್ತೂರು: ನೇತ್ರಾವತಿ ನದಿ ತಿರುವು ಮತ್ತು ಎತ್ತಿನಹೊಳೆ ಯೋಜನೆ ಎಂಟಾಯರ್ಲಿ ಡಿಫರೆಂಟ್, ಒಂದಕ್ಕೊಂದು ಸಂಬಂಧವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ನಿಟ್ಟಿನಲ್ಲಿ ತನ್ನ ಚುನಾವಣಾ ಪ್ರಚಾರ ಪ್ರಾರಂಭಿಸಲು ಭಾನುವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ವಿಶೇಷ ಪೂಜೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಡೀವಿ ಹೇಳುವುದೇನು?: ಎತ್ತಿನಹೊಳೆ ಎನ್ನುವ ತೊರೆ ಮತ್ತು ಇದರ ಪಕ್ಕದಲ್ಲಿ ಹರಿಯುವ 10 ತೊರೆಗಳಿಂದ ಮಳೆಗಾಲದ ಮೂರು ದಿನದ ನೀರನ್ನು ಸಂಗ್ರಹಿಸಿ 24 ಟಿಎಂಸಿ ನೀರು ಹಾಯಿಸುವುದು ಮಾತ್ರ ಈ ಯೋಜನೆ ಉದ್ದೇಶ. ನೇತ್ರಾವತಿ ನದಿ ತಿರುವು ಯೋಜನೆಯನ್ನು ನಾನೂ ವಿರೋಧಿಸುತ್ತೇನೆ. ಭೂ ಮಟ್ಟಕ್ಕಿಂತ 2850 ಅಡಿ ಮೇಲ್ಮಟ್ಟದಲ್ಲಿರುವ ಭಾಗದಲ್ಲಿ ಬೀಳುವ ಮಳೆಯ ನೀರನ್ನು ಮಾತ್ರ ಸಾಗಿಸುವ ಯೋಜನೆ ಕೈಗೊಳ್ಳಲಾಗಿದೆ. ಆದರೆ ಈ ವಿಚಾರವನ್ನು ಜನತೆಗೆ ಸಮರ್ಪಕವಾಗಿ ತಿಳಿಸುವಲ್ಲಿ ನಾವಾಗಲೀ ಸರ್ಕಾರವಾಗಲೀ ವಿಫಲರಾಗಿದ್ದೇವೆ. ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರದಲ್ಲಿ 1800 ಅಡಿಯಷ್ಟು ತೋಡಿದರೂ ನೀರು ಸಿಗದಂತಹ ದಯನೀಯ ಪರಿಸ್ಥಿತಿಯಲ್ಲಿರುವ ಆ ಭಾಗದ ಜನರಿಗೆ 24 ಟಿಎಂಸಿ ಮಳೆ ನೀರನ್ನು ಕೊಡುವುರಿಂದ ನೇತ್ರಾವತಿ ನದಿ ನೀರಿನ ಹರಿವಿಗೆ ಯಾವುದೇ ತೊಂದರೆ ಆಗಲಾರದು ಎಂದರು.
ದಿಕ್ಕು ತಪ್ಪಿಸುವ ಯತ್ನ: ಪರಿಸರವಾದಿಗಳೆಂದು ಹೇಳಿಕೊಳ್ಳುತ್ತಿರುವ ಹಲವರು ವಸ್ತುಸ್ಥಿತಿ ಅರಿಯದೆ ತಮ್ಮ ಅಸ್ತಿತ್ವಕ್ಕಾಗಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲೋ ಕೆಲವೊಂದು ಡೋಂಗಿ ಪರಿಸರವಾದಿಗಳು ಸಮಾಜದಲ್ಲಿ ಬದುಕಲು ಬಿಡದಂತಹ ಪರಿಸ್ಥಿತಿ ನಿರ್ಮಿಸುತ್ತಿರುವುದು ನೋವಿನ ಸಂಗತಿ ಎಂದರು.
ಬಿಜೆಪಿಗೆ 20ಕ್ಕಿಂತ ಅಧಿಕ ಸ್ಥಾನ: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯು 20ಕ್ಕಿಂತ ಅಧಿಕ ಸ್ಥಾನ ಪಡೆಯಲಿದೆ ಎಂದ ಡೀವಿ, ಪ್ರಸಕ್ತ ರಾಜಕಾರಣದಲ್ಲಿ ಇಡೀ ದೇಶದಲ್ಲಿಯೇ ಜನ ಬದಲಾವಣೆ ಬಯಸಿದ್ದಾರೆ. ರಾಜ್ಯದಲ್ಲಿ ಕಳೆದ ಬಾರಿ ಆದ ಹಿನ್ನಡೆಯನ್ನು ಮೆಟ್ಟಿ ನಿಂತು ಭಾರಿ ದೊಡ್ಡ ರೀತಿಯಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ. ಮೋದಿ ಮತ್ತು ಬಿಜೆಪಿ ಅಲೆಯು ಜನರ ಮೇಲೆ ಉತ್ತಮ ಪ್ರಭಾವ ಬೀರಿದೆ. ಇದರೊಂದಿಗೆ ಕಾಂಗ್ರೆಸ್ ವೈಫಲ್ಯ ಮತ್ತು ಗುಂಪುಗಾರಿಕೆ ಬಿಜೆಪಿಗೆ ವರದಾನವಾಗಲಿದೆ ಎಂದರು.
ಮಹಾಲಿಂಗೇಶ್ವರ ಕ್ಷೇತ್ರದಿಂದಲೇ ರಾಜಕಾರಣ: ಮಹಾಲಿಂಗೇಶ್ವರನ ಕ್ಷೇತ್ರದಿಂದಲೇ ನನ್ನ ರಾಜಕಾರಣ ಪ್ರಾರಂಭವಾಗಿದ್ದು, ಪುತ್ತೂರು ಮಹಾಲಿಂಗೇಶ್ವರನ ಆಶೀರ್ವಾದವೇ ತನಗೆ ಶ್ರೀರಕ್ಷೆಯಾಗಿದೆ. ದೇವರ ಆಶೀರ್ವಾದದೊಂದಿಗೆ ಮುಂದಿನ ಚುನಾವಣೆ ಕಣಕ್ಕೆ ಧುಮುಕುವ ನಿಶ್ಚಯದಿಂದ ಆಗಮಿಸಿರುವುದಾಗಿ ತಿಳಿಸಿದರು.
ಪುತ್ತೂರು ನಮೋ ಭಾರತ ಗೌರವಾಧ್ಯಕ್ಷ ಡಾ.ಎಂ.ಕೆ. ಪ್ರಸಾದ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಶ್ರೀಧರ್ ಪಟ್ಲ ಇದ್ದರು.