ಅನ್ನಭಾಗ್ಯದಲ್ಲಿ ರು. 125 ಕೋಟಿ ಭ್ರಷ್ಟಾಚಾರ
ಮಂಗಳೂರು: 'ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆ ಜಾರಿ ಬಂದ ಒಂದು ತಿಂಗಳಲ್ಲಿ ರು. 125 ಕೋಟಿ ಭ್ರಷ್ಟಾಚಾರ ಅಧಿಕಾರಿ ಮಟ್ಟದಲ್ಲಿ ನಡೆದಿದೆ' ಎಂದು ಲೋಕಾಯುಕ್ತ ನ್ಯಾ.ವೈ. ಭಾಸ್ಕರ ರಾವ್ ಹೇಳಿದರು.
ಸುರತ್ಕಲ್ ಗೋವಿಂದಾಸ್ ಕಾಲೇಜಿನಲ್ಲಿ ಸೋಮವಾರ ನಡೆದ ಹಿರಿಯ ಸಹಕಾರಿ ದಿ.ಪಿ. ಶ್ರೀನಿವಾಸ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ 'ಪ್ರಜಾಪ್ರಭುತ್ವ- ಆಡಳಿತ- ಭ್ರಷ್ಟಾಚಾರ' ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಭ್ರಷ್ಟಾಚಾರ ನಿವಾರಣೆಯ ಬಗ್ಗೆ ಸಮಾರೋಪಾದಿಯಲ್ಲಿ ಕಾರ್ಯಾಚರಣೆ ನಡೆಯಬೇಕಾಗಿದೆ. ಆಧುನಿಕ ಶೈಲಿಯಲ್ಲಿ ನೈತಿಕ ಮೌಲ್ಯಗಳು ಮತ್ತು ಸ್ವರಾಜ್ಯ ಪ್ರೇಮ ಭಾವನೆ ಮೂಡಿಸುವ ಅಗತ್ಯವಿದೆ. ಇಲ್ಲವಾದಲ್ಲಿ ಭಾರತದ ಅಭಿವೃದ್ಧಿ ಶೂನ್ಯ ಹಂತವನ್ನು ತಲುಪಬಹುದು ಎಂದರು. ದೇಶದಲ್ಲಿ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದಂತೆ 3 ಸಾವಿರಕ್ಕೂ ಅಧಿಕ ಕಾನೂನುಗಳಿವೆ. ಆದರೆ ಮಾಹಿತಿ ಲಭ್ಯತೆಯ ಕೊರತೆಯಿಂದ ಭ್ರಷ್ಟಾಚಾರ ಮತ್ತಷ್ಟು ಗಟ್ಟಿಗೊಂಡಿದೆ ಎಂದರು.
ನೈತಿಕ, ಧರ್ಮ ಶುದ್ಧ ಆಡಳಿತ ಅಗತ್ಯವಾಗಿದ್ದು, ಉನ್ನತ ವ್ಯಕ್ತಿತ್ವ, ನೈತಿಕತೆ ಅಧಿಕಾರಿಗಳಲ್ಲಿ ಮುಖ್ಯ. ಭ್ರಷ್ಟಾಚಾರದಿಂದ ದೇಶದ ಆರ್ಥಿಕತೆಗೆ ಹಿನ್ನಡೆಯಾಗುತ್ತಿದ್ದು, ಇದರಿಂದ ಮಧ್ಯಮ ಮತ್ತು ದುರ್ಬಲ ವರ್ಗದ ಜನರು ತೀವ್ರ ಬಡತನದತ್ತ ಸಾಗುವ ಸನ್ನಿವೇಶ ನಿರ್ಮಾಣವಾಗುತ್ತಿದೆ ಎಂದರು.
ವಕೀಲ ಪಿ.ಪಿ. ಹೆಗ್ಡೆ, ಜಿಲ್ಲಾ ಲಯನ್ಸ್ ರಾಜ್ಯಪಾಲ ಕೆ.ಸಿ. ಪ್ರಭು, ಜಿಲ್ಲಾ ಲಿಯೋ ಸಂಯೋಜಕ ವಿಜಯವಿಷ್ಣು ಮಯ್ಯ, ಮೈತ್ರಿ ಮಲಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜ್‌ಮೋಹನ್ ಇದ್ದರು.