ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಲ್ಲಡ್ಕ ಬೂದಿಮುಚ್ಚಿದ ಕೆಂಡ..

Lingaraj Badiger
Updated On : 11 Mar 2014, 12:43 pm

ಬಂಟ್ವಾಳ: ಶುಕ್ರವಾರ ಅಪರಾಹ್ನ ಇದ್ದಕ್ಕಿದ್ದಂತೆಯೇ ಉದ್ವಿಗ್ನಗೊಂಡಿದ್ದ ಕಲ್ಲಡ್ಕ ಪರಿಸರ ಇದೀಗ ಶಾಂತಸ್ಥಿತಿಯಲ್ಲಿದ್ದರೂ ಉದ್ವಿಗ್ನತೆ ಬೂದಿಮುಚ್ಚಿದ ಕೆಂಡದಂತಿದೆ. ಕಲ್ಲಡ್ಕದಿಂದ ಉಳಿದ ಕೋಮು ಸೂಕ್ಷ್ಮ ಪ್ರದೇಶಗಳಿಗೆ ಹರಡಿದ ಕಿಡಿಗೇಡಿಗಳ ಕೃತ್ಯಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಸರ್ಪಗಾವಲು ಹಾಕಿದೆಯಾದರೂ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೂಡಂಗಡಿಯೊಂದು ಕಿಡಿಗೇಡಿಗಳ ಅಟ್ಟಹಾಸಕ್ಕೆ ಸುಟ್ಟುಹೋಗಿದೆ.
ಮಂಗಳವಾರದ ವರೆಗೆ ಸೆಕ್ಷನ್ ಜಾರಿಯಲ್ಲಿರುವುದರಿಂದ ಎಲ್ಲೆಲ್ಲೂ ಪೊಲೀಸ್ ವಾಹನಗಳು ಗೋಚರಿಸುತ್ತಿದ್ದು, ಶುಕ್ರವಾರದ ಗುಂಪುಗಲಭೆಯ ಭಯ ಇನ್ನೂ ದೂರವಾಗಿಲ್ಲ. ಈ ನಡುವೆ ರಾಜಕೀಯ ಪಕ್ಷಗಳು, ಸಂಘಟನೆಗಳು ಶುಕ್ರವಾರದ ಗುಂಪುಗಲಭೆಗೆ ಸಮರ್ಥನೆ ಹಾಗೂ ಆಪಾದನೆ ಹೊರಿಸುವ ಭರದಲ್ಲಿ ಈ ಪ್ರಕರಣವನ್ನು ಜನತೆ ಮರೆಯಲೂ ಬಿಡುತ್ತಿಲ್ಲ. ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿಯಾದ ಕಲ್ಲಡ್ಕದ ಗುಂಪು ಗಲಭೆಯ ಬಗ್ಗೆ ಯಾವ ಪೊಲೀಸ್ ಅಧಿಕಾರಿಯೂ ಈವರೆಗೆ ಮಾಧ್ಯಮಗಳ ಜೊತೆ ಮಾತನಾಡಿಲ್ಲ. ಕೆಲ ರಾಜಕೀಯ ಮುಖಂಡರು ಚುನಾವಣಾ ನೀತಿ ಸಂಹಿತೆಯ ಕಾರಣಕ್ಕೆ ಮಾಧ್ಯಮಗಳ ಮುಂದೆ ಬರಲು ಹಿಂದೆಮುಂದೆ ನೋಡುತ್ತಿದ್ದಾರೆ. ಈನಡುವೆ ಹಿಂದೂ ಹಿತರಕ್ಷಣಾ ಸಮಿತಿ, ಕಾಂಗ್ರೆಸ್ ಸಾಮರಸ್ಯ ಸಮಾವೇಶ ನಡೆಸುವ ಮೂಲಕ ಚುನಾವಣಾ ನೀತಿ ಸಂಹಿತೆಉಲ್ಲಂಘಿಸಿದೆ ಎಂದು ಆರೋಪಿಸುತ್ತಿದೆ. ಆದರೆ ಬಂಟ್ವಾಳ ತಹಸೀಲ್ದಾರ್, ಸಹಾಯಕ ಚುನಾವಣಾಧಿಕಾರಿ ಮಲ್ಲೇಸ್ವಾಮಿಯವರು ಸಾಮರಸ್ಯ ಸಮಾವೇಶಕ್ಕೆ ಕಾಂಗ್ರೇಸ್ ಅನುಮತಿ ಪಡೆದುಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೂವರಿಗೆ ವರ್ಗ- ವ್ಯಾಪಕ ಚರ್ಚೆ
ಬಂಟ್ವಾಳ: ಕಲ್ಲಡ್ಕದ ಕಾಂಗ್ರೆಸ್ ಸಾಮರಸ್ಯ ಸಮಾವೇಶದ ಸಂದರ್ಭದಲ್ಲಿ ಸ್ಥಳದಲ್ಲೇ ಇಲ್ಲದ ಇಬ್ಬರ ಸಹಿತ ಕಲ್ಲೇಟಿನಿಂದ ಗಾಯಗೊಂಡು ಆಸ್ಪತ್ರೆಗೆ ಸೇರಿದ ಒಬ್ಬ ಸಿಬ್ಬಂದಿಯೂ ಸೇರಿದಂತೆ ಮೂವರು ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾಕ್ಕೆ ಹಠಾತ್ತನೇ ವರ್ಗಾಯಿಸಿರುವುದು ಪೊಲೀಸ್ ಇಲಾಖಾ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮಾ.8ರಂದು ಕಲ್ಲಡ್ಕದಲ್ಲಿ ನಡೆದ ಗುಂಪು ಗಲಭೆಯ ವೇಳೆ ಸ್ಥಳದಲ್ಲಿದ್ದ ಕಾನ್ಸ್‌ಟೇಬಲ್ ಪ್ರದೀಪ್, ಕುಮಾರ್ ಹಾಗೂ ಘಟನೆಯ ಸಂದರ್ಭದಲ್ಲಿ ತಲೆಗೆ ಕಲ್ಲೇಟಿನಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ರಮೇಶ್ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ ಎಂದು ತಿಳಿದುಬಂದಿದೆ. ಗಲಭೆಯಂದು ಸ್ಥಳದಲ್ಲಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ರಾಜಶೇಖರ್ ಮೇಸ್ತ್ರಿಯವರ ನಿರ್ಲಕ್ಷ್ಯದಿಂದ ಗಲಭೆ ಉಲ್ಬಣಿಸಿದೆಯೆಂದು ಆರೋಪಿಸಲಾಗಿದ್ದು, ಈ ಸಂದರ್ಭದಲ್ಲಿ ಸಬ್ ಇನ್ಸ್‌ಪೆಕ್ಟರ್ ಸಂಜೀವ ಕುಮಾರ್ ಸಹಿತ  ಸಿಬ್ಬಂದಿ ರಮೇಶ್, ಮುರುಗೇಶ್ ಕಲ್ಲೇಟಿನಿಂದ ಗಾಯಗೊಂಡಿದ್ದರು. ಘಟನೆಯಂದು ಪ್ರದೀಪ್ ಅವರು ಇಲಾಖಾ ತರಬೇತಿಗಾಗಿ ಉಡುಪಿಯಲ್ಲಿದ್ದರೆ, ಕುಮಾರ್ ಪುತ್ತೂರಿನಲ್ಲಿದ್ದರು. ರಮೇಶ್ ಸ್ಥಳದಲ್ಲಿ ಕರ್ತವ್ಯ ನಿರತರಾಗಿದ್ದರು. ಆದರೆ ಕರ್ತವ್ಯಲೋಪದ ಆರೋಪದಲ್ಲಿ ಇವರನ್ನು ದಿಡೀರನೇ ವರ್ಗಾಯಿಸಿದ್ದರ ಹಿಂದೆ ರಾಜಕೀಯ ಕೈವಾಡ ವಿದೆ ಎಂಬ ಆರೋಪವೂ ಕೇಳಿಬಂದಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ನಡೆದಿರುವ ಈ ವರ್ಗಾಣೆ ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಇತರ ಪೊಲೀಸರನ್ನು ಕಾಡಿದೆ. ಇದೇ ಮೊದಲಬಾರಿಗೆ ಹೊರಜಿಲ್ಲೆಯಾದ ಉತ್ತರ ಕನ್ನಡಕ್ಕೆ ಸಿಬ್ಬಂದಿಯನ್ನು ವರ್ಗಾಯಿಸಿರುವುದೂ ಚರ್ಚಗೆ ಗ್ರಾಸವಾಗಿದೆ.

ಬಂಟ್ವಾಳ ಸಿಐ ಪಕ್ಷಪಾತ ಧೋರಣೆ; ಬಿಜೆಪಿ
ಬಂಟ್ವಾಳ: ಕಲ್ಲಡ್ಕದಲ್ಲಿ ನಡೆದ ಗುಂಪುಗಲಭೆಗೆ ಸಂಬಂಧಿಸಿ ಬಂಟ್ವಾಳ ವೃತ್ತನಿರೀಕ್ಷಕರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದು ಅಮಾಯಕ ಹಿಂದೂ ಯುವಕರನ್ನು ಬಂಧಿಸುತ್ತಿರುವುದಲ್ಲದೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಬಿಜೆಪಿ ಮುಖಂಡರು ಪಶ್ಚಿಮ ವಲಯ ಐಜಿಪಿ, ಜಿಲ್ಲಾ ಎಸ್ಪಿ ಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಬಂಧನದ ನೆಪದಲ್ಲಿ ಅಮಾಯಕರಿಗೆ ಕಿರುಕುಳ ನೀಡದಿರಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮುಖಂಡರು ಈ ಸಂದರ್ಭ ಒತ್ತಾಯಿಸಿದರು. ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ರಾಜೇಶ್ ನಾಯಕ್ ಉಳೀಪಾಡಿಗುತ್ತು, ರುಕ್ಮಯ ಪೂಜಾರಿ,  ಪದ್ಮನಾಭ ಕೊಟ್ಟಾರಿ, ಜಗದೀಶ್ ಅಧಿಕಾರಿ, ಉಮಾನಾಥ ಕೋಟ್ಯಾನ್, ಶ್ರೀಕರ ಪ್ರಭು, ಪ್ರಸಾದ್ ಕುಮಾರ್, ಆಶಾ ಪ್ರಸಾದ್, ಜಿ.ಆನಂದ, ಪುರುಷ ಸಾಲ್ಯಾನ್, ರಾಮದಾಸ್ ಬಂಟ್ವಾಳ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement