ತುಳುರಾಜ್ಯ ಮಾಡ್ತಾರಂತೆ 'ಆಪ್' ಅಭ್ಯರ್ಥಿ!
ಮಂಗಳೂರು: ಆಮ್ ಆದ್ಮಿ ಪಕ್ಷದಿಂದ ಲೋಕಸಭೆ ಚುನಾವಣೆ ಅಭ್ಯರ್ಥಿಯಾಗಿ ದ.ಕ. ಜಿಲ್ಲೆಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್. ವಾಸುದೇವ ಆಯ್ಕೆಯಾಗಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣದ ಗುರಿಯಿದೆ. ಅಭಿವೃದ್ಧಿ ಮತ್ತು ಬದಲಾವಣೆಯ ಆಶಯದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದರು.
ದೇಶದಲ್ಲಿ ಭ್ರಷ್ಟಾಚಾರ ತುಂಬಿ ಹೋಗಿದೆ. ಇದಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಹೊಣೆ. ಕರಾವಳಿ ಭಾಗಕ್ಕೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರಿಸಿಕೊಂಡು ಪ್ರತ್ಯೇಕ ತುಳು ರಾಜ್ಯ ಮಾಡಬೇಕೆಂಬುವುದು ನಮ್ಮ ಮುಖ್ಯ ಬೇಡಿಕೆ. ನೀರಿನ ಸಂರಕ್ಷಣೆಗಾಗಿ ಚೆಕ್ ಡ್ಯಾಂಗಳ ನಿರ್ಮಾಣ, ಏರ್‌ಪೋರ್ಟ್‌ನಲ್ಲಿ ಕಾರ್ಗೋ ನಿರ್ವಹಣೆಗೆ ಒತ್ತು ಸೇರಿದಂತೆ ಹಲವು ಯೋಜನೆಗಳ ಕನಸಿದೆ ಎಂದರು. ಪಕ್ಷದ ಮುಖಂಡ ಪೃಥ್ವಿ ರೆಡ್ಡಿ ಮಾತನಾಡಿ, ಚುನಾವಣೆ ಖರ್ಚಿಗಾಗಿ 3,500 ಮಂದಿಯಿಂದ ತಲಾ ರು. 2 ಸಾವಿರದಂತೆ ಸಂಗ್ರಹಿಸಲಾಗುತ್ತಿದೆ. ಲೆಕ್ಕಪತ್ರಗಳ ಪಾರದರ್ಶಕತೆಗಾಗಿ ಸಾರ್ವಜನಿಕರ ಮುಂದೆ ಪಡೆದುಕೊಂಡ ಹಣಕ್ಕಾಗಿ ರಶೀದಿ ನೀಡಲಾಗುತ್ತದೆ ಎಂದರು. ಪಕ್ಷದ ಮುಖಂಡರಾದ ಧಮೇಂದ್ರ, ಜಯರಾಮ್ ಶ್ರೀಯಾನ್ ಇದ್ದರು.
--
ರಾಷ್ಟ್ರೀಯ ಪ್ರತಿಭಾನ್ವೇಷಣೆ
11 ವಿದ್ಯಾರ್ಥಿಗಳು ಆಯ್ಕೆ
ಮಂಗಳೂರು: ಸೆಂಟರ್ ಫಾರ್ ಎಡ್ವಾನ್ಸ್‌ಡ್ ಲರ್ನಿಂಗ್‌ನಲ್ಲಿ ತರಬೇತಿ ಪಡೆದ 11 ವಿದ್ಯಾರ್ಥಿಗಳು ರಾಜ್ಯಮಟ್ಟದ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ.
ರಾಜ್ಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಇಲಾಖೆಯು 2013ರ ನವೆಂಬರ್‌ನಲ್ಲಿ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ ನಡೆಯಿತು. ಪ್ರಥಮ ಹಂತದ ಪರೀಕ್ಷೆಯಲ್ಲಿ ರಾಜ್ಯದಿಂದ ಒಟ್ಟು 51,320 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಂಗಳೂರಿನಿಂದ ಆಯ್ಕೆಯಾದ 16 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಸಿಎಫ್‌ಎಎಲ್ ಸಂಸ್ಥೆಯಲ್ಲಿ ತರಬೇತಿ ಪಡೆದವರಾಗಿದ್ದಾರೆ ಎಂದು ಪ್ರಾಂಶುಪಾಲೆ ಸೆವ್ರಿನ್ ರೊಜಾರಿಯೋ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ರೋಟರ್ ಆಂಗ್ಲಮಾಧ್ಯಮ ಶಾಲೆ ವಿದ್ಯಾರ್ಥಿ ಕೆನ್ರಿಕ್ ಪಿಂಟೋ, ಶಾರದಾ ವಿದ್ಯಾಲಯದ ವೈಷ್ಣವಿ ಬಲ್ಲಾಳ್, ವಿರಾಜ್ ಸುವರ್ಣ, ಯಶಸ್ ಸಮಾಗ, ಮಧುರಾ ಕಾರಂತ್, ಆಶುತೋಶ್ ಕೆ.ಸಿ., ಪಣಂಬೂರು ಕೇಂದ್ರಿಯ ವಿದ್ಯಾಲಯದ ಪ್ರಣವ್ ಎಸ್, ಸಾಂತನು ಶ್ರೀನಿವಾಸ್, ಕೆನರಾ ಪ್ರೌಢಶಾಲೆಯ ತುಷಾರ್, ಪಿ. ಗೋಪಾಲಕೃಷ್ಣ ನಾಯಕ್ ಆಯ್ಕೆಯಾಗಿದ್ದಾರೆ.
--
ಕಲ್ಲಡ್ಕ ಪೊಲೀಸ್ ವೈಫಲ್ಯ: ಐವನ್
ಮಂಗಳೂರು: ಕಲ್ಲಡ್ಕದಲ್ಲಿ ಸೌಹಾರ್ದ ಸಮಾವೇಶದಲ್ಲಿ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಆರೋಪಿಸಿದ್ದಾರೆ.
ಕರ್ತವ್ಯ ಲೋಪ ಮಾಡಿದ ಪೊಲೀಸರನ್ನು ಸಸ್ಪೆಂಡ್ ಮಾಡಬೇಕು. ದುಷ್ಕರ್ಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದೇ ಇದ್ದರೆ ಚುನಾವಣೆ ನ್ಯಾಯ ಸಮ್ಮತ ರೀತಿಯಲ್ಲಿ ನಡೆಯಲು ಸಾಧ್ಯವಿಲ್ಲ. ಚುನಾವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಹೆಚ್ಚಿನ ನಿಗಾ ವಹಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸೌಹಾರ್ದಕೊಸ್ಕರವೇ ಸಭೆ ಮಾಡಿದ್ದೆವು. ಜಿಲ್ಲಾ ಪಂಚಾಯ್ತಿ ಸದಸ್ಯ ತುಂಬೆ ಪ್ರಕಾಶ್ ಶೆಟ್ಟಿ ಪ್ರಚೋದನಕಾರಿಯಾಗಿ ಮಾತನಾಡಿಲ್ಲ. ಕಲ್ಲು ಎಸೆಯುತ್ತಿದ್ದರೂ ಒಂದು ಕಾಲು ಗಂಟೆ ಕಾಲ ಸಮಾವೇಶದಲ್ಲಿದ್ದವರಿಗೆ ಪೊಲೀಸರು ರಕ್ಷಣೆ ನೀಡಿಲ್ಲ. ಹಿಂದೂ ಸಮಾವೇಶಕ್ಕೆ ಸಾವಿರಾರು ಪೊಲೀಸರನ್ನು ನಿಯೋಜಿಸುತ್ತಾರೆ. ಕಲ್ಲಡ್ಕದಲ್ಲಿ ಮಾತ್ರ ಕೇವಲ 18 ಮಂದಿ ಪೊಲೀಸರನ್ನು ಬಂದೋಬಸ್ತ್‌ಗೆ ಹಾಕಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದವರ ಮನೆ, ವಾಹನಗಳ ಮೇಲೆ ಕಲ್ಲು ತೂರಲಾಗಿದೆ. ಉಸ್ತುವಾರಿ ಸಚಿವ ರಮಾನಾಥ ರೈಗಳ ರಕ್ಷಣೆಗೆ ಒಬ್ಬನೇ ಒಬ್ಬ ಪೊಲೀಸ್ ನಿಯೋಜಿಸಲಾಗಿಲ್ಲ ಎಂದರು.
ಅಶಾಂತಿ ಉಂಟು ಮಾಡುವ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಈಗಲಾದರೂ ಬಂಧಿಸಲಿ. ಗಲಭೆ ನಡೆಸುವ ರೌಡಿಗಳನ್ನು ಚುನಾವಣೆ ಆಯೋಗ ಬಂಧಿಸಲಿ ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮೇರಿಲ್ ರೇಗೋ ಇದ್ದರು.