ಬೈಕ್ ಸ್ಕಿಡ್: ಇಬ್ಬರು ಪಾದಚಾರಿಗಳಿಗೆ ಗಾಯ
ಸುಳ್ಯ: ಸುಳ್ಯದ ಬಾಳೆಮಕ್ಕಿ ಬಳಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಸ್ತೆ ದಾಟುತ್ತಿದ್ದ ಪಾದಚಾರಿಗಳಿಬ್ಬರಿಗೆ ಡಿಕ್ಕಿ ಹೊಡೆದ ಘಟನೆ ಸೋಮವಾರ ನಡೆದಿದೆ. ಶ್ರೀರಾಂಪೇಟೆ ಕಡೆಯಿಂದ ಸತೀಶ್ ಮಂಡೆಕೋಲು ಚಲಾಯಿಸುತ್ತಿದ್ದ ಬೈಕ್ ಅತಿ ವೇಗವಾಗಿದ್ದು, ಸವಾರನ ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿತ್ತು. ಬಳಿಕ ಬೈಕ್ ಎಸೆಯಲ್ಪಟ್ಟು ಎದುರಿನಿಂದ ರಸ್ತೆ ದಾಟುತ್ತಿದ್ದ ಮರ್ಕಂಜದ ಗೋಳಿಯಡ್ಕ ಗೀತಾ, ಅವರ ಮಗಳು ಸೌಜನ್ಯಾ ಎಂಬವರಿಗೆ ಬೈಕ್ನ ಹಿಂಬದಿ ತಾಗಿ ಇಬ್ಬರು ಗಾಯಗೊಂಡರು.
ಹಲ್ಲೆ: ದೂರು
ಸುಳ್ಯ: ಟಾರ್ಚ್ ಲೈಟ್ ಮುಖಕ್ಕೆ ತಾಗಿತೆಂದು ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇತ್ತೀಚೆಗೆ ಪೆರುವಾಜೆ ಗ್ರಾಮದ ಬಜ ಮನೆಯ ಕಿರಣ್ ಕುಮಾರ್ ಎಂಬವರು ರಾತ್ರಿ ವೇಳೆ ಸಮೀಪದ ಅಂಗಡಿಗೆ ಕೈಯಲ್ಲಿ ಟಾರ್ಚ್ ಹಿಡಿದು ರಸ್ತೆಯಲ್ಲಿ ಬರುತ್ತಿರುವಾಗ ಟಾರ್ಚ್ನ ಬೆಳಕು ಎದುರಿನಿಂದ ಬರುತ್ತಿರುವ ಶಿವ ಮಣಿಯಾಣಿ ಮುಖಕ್ಕೆ ತಾಗಿತ್ತು. ಅವರು ಕಿರಣ್ಗೆ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಕಿರಣ್, ಶಿವ ಮಣಿಯಾಣಿ ವಿರುದ್ಧ ದೂರು ನೀಡಿದ್ದಾರೆ.