ಭೂಗತ ಪಾತಕಿಗಳು ಮತ್ತೆ ಸಕ್ರಿಯ
ಮಂಗಳೂರು: ಭೂಗತ ಪಾತಕಿಗಳು ಪಿಸ್ತೂಲ್ ತೋರಿಸಿ ಹಫ್ತಾ ಪಡೆಯುವ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಬಿಜೈ ಆನೆಗುಂಡಿ ರಸ್ತೆಯ ಭಾರತಿ ಬಿಲ್ಡರ್ಸ್ ಕಚೇರಿಗೆ ಸೋಮವಾರ ಬೆಳಗ್ಗೆ 10.45ಕ್ಕೆ ನುಗ್ಗಿದ್ದ ಇಬ್ಬರು ಹಫ್ತಾ ವಸೂಲಿಗೆ ಭೂಗತ ಪಾತಕಿಯ ದೂರವಾಣಿ ಸಂಖ್ಯೆಯ ಚೀಟಿ ನೀಡಿದ ಬಳಿಕ ಪಿಸ್ತೂಲ್‌ನಿಂದ ಮಿಸ್ ಫೈರ್ ಮಾಡಿದ್ದಾರೆ.
ಭಾರತಿ ಬಿಲ್ಡರ್ಸ್ ಮಾಲೀಕ ಲೋಕನಾಥ ಶೆಟ್ಟಿಗೆ ಹಿಂದೆ ಹಫ್ತಾ ವಸೂಲಿಗೆ ಬೆದರಿಕೆ ಕರೆಗಳು ಬರುತ್ತಿದ್ದವು. ಸೋಮವಾರ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಿಲ್ಡರ್ಸ್ ಕಚೇರಿಯತ್ತ ಬಂದಿದ್ದಾರೆ. ಒಬ್ಬ ಒಳ ನುಗ್ಗಿದರೆ ಇನ್ನೊಬ್ಬ ಹೊರಗಡೆ ಕಾಯುತ್ತಿದ್ದ. ಒಳಗಿದ್ದ ಇಬ್ಬರು ಮಹಿಳಾ ಸಿಬ್ಬಂದಿಯನ್ನು ಬಾಸ್ ಎಲ್ಲಿ ಎಂದು ಆರೋಪಿ ಕೇಳಿದ್ದಾನೆ. ಬಾಸ್ ರಜೆಯಲ್ಲಿ ಇದ್ದಾರೆ ಎಂದು ರಿಸೆಪ್ಶನಿಸ್ಟ್ ಹೇಳಿದಾಗ 'ಈ ಪತ್ರವನ್ನು ಬಾಸ್‌ಗೆ ನೀಡಿ' ಎಂದು ಹೇಳಿದ್ದಾನೆ. ಬಳಿಕ ಬೆದರಿಸಲು ಪಿಸ್ತೂಲ್‌ನಿಂದ ಸಜೀವ ಗುಂಡು ಸಿಡಿಸದೆ ಕೆಳಗೆ ಬೀಳುವಂತೆ ಮಿಸ್ ಫೈರ್ ಮಾಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಸಜೀವ ಗುಂಡು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸ್ ಕಮಿಷನರ್ ಆರ್. ಹಿತೇಂದ್ರ, ಡಿಸಿಪಿ ವಿಷ್ಣುವರ್ಧನ್, ಡಿಸಿಐಬಿ ಇನ್‌ಸ್ಪೆಕ್ಟರ್ ವೆಲೆಂಟೇನ್ ಡಿಸೋಜ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ತಪಾಸಣೆ ನಡೆಸಿ, ಸಾಕ್ಷ್ಯ ಕಲೆಹಾಕಿದ್ದಾರೆ. ಭೂಗತ ಪಾತಕಿಯ ಹೆಸರು ಹೇಳಿದರೆ ಆತನ ಕೆಟ್ಟ ಸಂದೇಶ ಇತರರ ಮೇಲೂ ಪ್ರಭಾವ ಬೀಳುವ ಸಾಧ್ಯತೆಯಲ್ಲಿ ಪೊಲೀಸರು ಬಹಿರಂಗ ಪಡಿಸಿಲ್ಲ.
'ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ದುಷ್ಕರ್ಮಿಗಳು ನೀಡಿದ ಪತ್ರದಲ್ಲಿ ಸಂಪರ್ಕ ಮೊಬೈಲ್ ನಂಬರ್ ಬರೆಯಲಾಗಿದೆ. ತನಿಖೆ ನಡೆಯುತ್ತಿದೆ. ಪ್ರಕರಣವನ್ನು ಶೀಘ್ರ ಭೇದಿಸಲಾಗುವುದು' ಎಂದು ಕಮಿಷನರ್ ಆರ್.ಹಿತೇಂದ್ರ ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ಮುಖ!: ಆರೋಪಿಗಳ ಮುಖ ಸಿಸಿ ಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಪೊಲೀಸರು ವೀಡಿಯೋ ಕ್ಲಿಪ್ಪಿಂಗ್ ಪಡೆದು ಶೋಧ ನಡೆಸುತ್ತಿದ್ದಾರೆ.