ಮತ್ತೆ ನೈತಿಕ ಪೊಲೀಸ್ಗಿರಿ
ಮಂಗಳೂರು: ಜಾರ್ಖಂಡ್ ಮೂಲದ ಮುಸ್ಲಿಂ ಯುವಕ, ಯುವತಿ ಕಾನ ಇಡ್ಯಾದಲ್ಲಿ ಸಂಬಂಧಿಯ ಮನೆಯಲ್ಲಿ ಇದ್ದ ವೇಳೆ ನೈತಿಕ ಪೊಲೀಸರು ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ. ಕಾನ ಇಡ್ಯಾದಲ್ಲಿ ಸೋಮವಾರ ಮಧ್ಯಾಹ್ನ ಮೊಹಮ್ಮದ್ ಅನ್ಸಾರ್ (25) ಗೆಳೆಯನ ಮನೆಯಲ್ಲಿ ಪದವಿಧರೆ ಸಂಬಂಧಿ ಯುವತಿ ಜತೆ ತಿಂಡಿ ತಿನ್ನುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದೆ. ಅನೈತಿಕ ಕೆಲಸ ಮಾಡುತ್ತಿದ್ದಾರೆ ಎಂಬ ಸಂಶಯದಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಜಾರ್ಖಂಡ್ ಮೂಲದ ಯುವತಿಗೆ ಈತ ದೂರದ ಸಂಬಂಧಿ. ಅನ್ಸಾರ್ ಮೇಸ್ತ್ರಿ ಕೆಲಸ ಮಾಡುತ್ತಿದ್ದ. ತನ್ನ ಗೆಳೆಯ ಶಿಫಾರಸು ಮೇರೆಗೆ ಟೈಲರಿಂಗ್ ಕೆಲಸ ತೆಗೆಸಿಕೊಡುವುದಾಗಿ ಹೇಳಿ ಸುರತ್ಕಲ್ಗೆ ಕರೆದುಕೊಂಡು ಬಂದಿದ್ದ. ಆದರೆ ಗೆಳೆಯ ಕಚೇರಿಗೆ ಹೋಗದೆ ಮನೆಯಲ್ಲಿ ಇದ್ದ. ಯುವತಿ ಜತೆ ಅನ್ಸಾರ್ ಮನೆಗೆ ತಿಂಡಿ ತೆಗೆದುಕೊಂಡು ಹೋಗಿದ್ದ. ಮೂರು ಮಂದಿ ತಿಂಡಿ ತಿನ್ನುತ್ತಿದ್ದ ವೇಳೆಗೆ ದಾಳಿ ನಡೆದಿದೆ.
ಮೂವರು ಜಾರ್ಖಂಡ್ ಮೂಲದವರು. ಯುವತಿ ತಾಯಿ ಪಂಜಿಮೊಗರಲ್ಲಿ ವಾಸವಿದ್ದಾರೆ. ಹಿಂದೂ ಯುವತಿ, ಮುಸ್ಲಿಂ ಯುವಕನ ಜತೆ ಬಂದ ಕಾರಣಕ್ಕೆ ಹಲ್ಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಬುರ್ಕಾ ಹಾಕಿಲ್ಲ ಎಂಬ ಕಾರಣಕ್ಕೆ ಹಲ್ಲೆ ನಡೆದಿರುವ ಸಾಧ್ಯತೆಗಳಿವೆ.
ಸುರತ್ಕಲ್ ಪೊಲೀಸರು ವಿಚಾರಣೆ ನಡೆಸಿದ ವೇಳೆ ಮೂವರು ನೀಡುತ್ತಿರುವ ಹೇಳಿಕೆಗಳು ತಾಳೆಯಾಗುತ್ತಿಲ್ಲ. ಆದರೆ ಪೊಲೀಸರು ಹೇಳಿಕೆ ಪಡೆದು ಬಿಟ್ಟಿದ್ದಾರೆ.
--
ಅಡಕೆ ಕಳವು ಯತ್ನ ವಿಫಲ
ಉಪ್ಪಿನಂಗಡಿ: ಮನೆಯಂಗಳದಲ್ಲಿ ಒಣಗಿಸಲು ಹಾಕಿದ್ದ ಅಡಕೆ ಕಳವಿಗೆ ವಿಫಲ ಯತ್ನ ಗೋಳಿತೊಟ್ಟಿನಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಪಂಚಾಯಿತಿ ಸದಸ್ಯರೂ ಆಗಿರುವ, ಉದ್ಯಮಿ ನಾಸೀರ್ ಎಂಬವರ ಮನೆಯಲ್ಲಿ ಈ ಕಳವು ಯತ್ನ ನಡೆದಿದೆ. ನಾಸೀರ್ ಕಾರ್ಯ ನಿಮಿತ್ತ ಬೆಂಗಳೂರಿಗೆ ಹೋಗಿದ್ದ ಸಂದರ್ಭ, ತಡರಾತ್ರಿ ಮಾರುತಿ ಓಮ್ನಿ ಕಾರಿನಲ್ಲಿ ಬಂದ ಇಬ್ಬರು ಕಳ್ಳರು, ಅಂಗಳದಲ್ಲಿ ಒಣಗಿಸಲು ಹಾಕಿದ್ದ ಅಡಕೆ ಕದ್ದೊಯ್ಯಲು ಗೋಣಿ ಚೀಲದಲ್ಲಿ ತುಂಬಿಸಿಡುತ್ತಿದ್ದರು. ಈ ಸಂದರ್ಭ, ಮನೆ ಕೆಲಸದಾಳು ರಾಯಪ್ಪ ಎಂಬವರು ಕಳವು ವೃತ್ಯ ಕಂಡು ಕಿರುಚಿದರು ಎನ್ನಲಾಗಿದೆ. ಧಾವಿಸಿ ಬಂದ ಸ್ಥಳೀಯರು ಕಳ್ಳರು ಬಂದ ಕಾರಿಗೆ ಕಲ್ಲು ಎಸೆದರು ಎನ್ನಲಾಗಿದೆ. ಆಗ, ಅಡಕೆ ಅಲ್ಲೇ ಬಿಟ್ಟ ಕಳ್ಳರು ಕಾರಿನಲ್ಲಿ ಆಲಂತಾಯ ಮಾರ್ಗವಾಗಿ ಸಾಗಿ ಕೊಯ್ಲ ಬಳಿ ಕಾರನ್ನು ರಸ್ತೆ ಬದಿಯಲ್ಲಿಟ್ಟು ಪರಾರಿಯಾಗಿದ್ದಾರೆ. ಕಳ್ಳರು ಬಿಟ್ಟು ಹೋದ ಕಾರಿನಲ್ಲಿಯೂ ಅಡಕೆ ಮೂಟೆಗಳಿದ್ದವೆನ್ನಲಾಗಿದ್ದು, ಈ ಅಡಕೆಯನ್ನು ಕೊಕ್ಕಡ ಪರಿಸರದಲ್ಲಿ ಕದ್ದಿರುವ ಸಾಧ್ಯತೆ ಶಂಕಿಸಲಾಗಿದೆ. ರಸ್ತೆ ಬದಿಯಲ್ಲಿರಿಸಲಾದ ಕಾರನ್ನು ಪುತ್ತೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.