ಸೂರಿಕುಮೇರಿ ಅಂಗಡಿಗೆ ಬೆಂಕಿ; ಸಂಪೂರ್ಣ ಭಸ್ಮ
ವಿಟ್ಲ: ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಮಾಣಿ ಸಮೀಪದ ಸೂರಿಕುಮೇರಿನಲ್ಲಿ ರವಿವಾರ ರಾತ್ರಿ ಕಿಡಿಗೇಡಿಗಳು ಅಂಗಡಿಗೆ ಬೆಂಕಿ ಹಚ್ಚಿದ ಪರಿಣಾಮ ಸಂಪೂರ್ಣ ಭಸ್ಮಗೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಸುಮಾರು 70 ಸಾವಿರ ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.
ಸೂರಿಕುಮೇರು ಪೇಟೆಯಲ್ಲಿ 30 ವರ್ಷಗಳ ಹಿಂದೆ ಅಂಗಡಿ ತೆರೆದ ಅಬ್ದುಲ್ ಅಝೀಝ್ ಅವರು ದಿನಪತ್ರಿಕೆ, ಬೇಕರಿ ತಿನಸುಗಳನ್ನು ಮಾರಾಟ ಮಾಡುತ್ತಿದ್ದರು. ಪ್ರತಿದಿನ ರಾತ್ರಿ ಅವರು ಅಂಗಡಿಯಲ್ಲಿಯೇ ಮಲಗುತ್ತಿದ್ದರು. ರವಿವಾರ ರಾತ್ರಿ ಅಂಗಡಿ ಮುಚ್ಚಿ ಮಲಗಿದ್ದ ಅವರಿಗೆ 11.45ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದ್ದು, ಮಹಡಿ ಹಂಚುಗಳು ಸ್ಫೋಟಗೊಳ್ಳುತ್ತಿದ್ದ ಶಬ್ದಕ್ಕೆ ಎಚ್ಚರಗೊಂಡು ಅವರು ಹೊರಗಡೆ ಬಂದಿದ್ದಾರೆ. ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರು ಬೆಂಕಿ ನಂದಿಸಲು ಮುಂದಾಗಿದ್ದು, ರಾತ್ರಿ ಗಂಟೆ 12ಕ್ಕೆ ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. 12.10ಕ್ಕೆ ಸ್ಥಳಕ್ಕೆ ತಲುಪಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ 1.50ಕ್ಕೆ ಮರಳಿ ಕಚೇರಿಗೆ ತಲುಪಿದ್ದಾರೆಂದು ತಿಳಿದುಬಂದಿದೆ. ಆಘಾತಕ್ಕೊಳಗಾಗಿದ್ದ ಅಂಗಡಿ ಮಾಲಕ ಅಝೀಝ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಅಂಗಡಿಯಲ್ಲಿದ್ದ ರು. 8 ಸಾವಿರ ನಗದು, ರು. 20 ಸಾವಿರ ಮೌಲ್ಯದ ದಿನಸಿ ಸಾಮಗ್ರಿಗಳು, ಬಟ್ಟೆ ಬರೆಗಳು ನಾಶವಾಗಿವೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಗಡಿಯಲ್ಲಿ ಸೀಮೆಯೆಣ್ಣೆ ಕ್ಯಾನ್ ಹಾಗೂ ಆಮ್ಲೆಟ್ ಮಾಡುವ ಸ್ಟವ್ ಒಟ್ಟಿಗೇ ಜೋಡಿಸಿಡಲಾಗಿತ್ತು ಎನ್ನಲಾಗುತ್ತಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಂಗಡಿಗೆ ಬೆಂಕಿ ಬಿದ್ದಿದೆ ಎಂಬ ಮಾಹಿತಿಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಆದುದರಿಂದ ಇದು ಕಿಡಿಗೇಡಿಗಳ ಕೃತ್ಯವೇ ಅಥವಾ ಬೆಂಕಿ ಆಕಸ್ಮಿಕವೇ ಎಂಬ ಬಗ್ಗೆ ಗೊಂದಲವಿದೆ. ಕಲ್ಲಡ್ಕದಲ್ಲಿ ಗಂಭೀರ ಪ್ರಕರಣ ನಡೆದಿರುವುದು ಈ ಸಂಶಯಕ್ಕೆ ಕಾರಣ.
ಅಂಗಡಿಯ ಮುಂಭಾಗದಲ್ಲಿದ್ದ, ಹನೀಫ್ ಅವರ ಹಣ್ಣುಹಂಪಲು ಮಾರಾಟ ಮಾಡುವ ಗೂಡಂಗಡಿಗೂ ಬೆಂಕಿ ಹಾಕಲಾಗಿದೆ ಎನ್ನಲಾಗಿದೆಯಾದರೂ ಹಾನಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಹಾಗೂ ಪ್ರಕರಣ ದಾಖಲಾಗಿಲ್ಲ ಎನ್ನುವುದು ಇಲ್ಲಿ ಗಮನಾರ್ಹ.