ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅವ್ಯವಸ್ಥೆ ವಿರೋಧಿಸದಿದ್ದರೆ ಸಾಹಿತ್ಯ ರೂಪುಗೊಳ್ಳದು: ಪ್ರಭಾಕರ ಶಿಶಿಲ

Rashmi Kasaragodu
Updated On : 13 Mar 2014, 12:17 pm

ಉಪ್ಪಿನಂಗಡಿ: ಅವ್ಯವಸ್ಥೆಯನ್ನು ಸ್ವಲ್ಪವಾದರೂ ವಿರೋಧಿಸದಿದ್ದರೆ ಸಾಹಿತ್ಯ ರೂಪುಗೊಳ್ಳದು. ಸಮಾಜದಲ್ಲಿರುವ ಅವ್ಯವಸ್ಥೆಗಳನ್ನು ತಿದ್ದುವ ಮೂಲಕ ಅಲ್ಪವಾದರೂ ಬದಲಾವಣೆ ತರಲು ಸಾಧ್ಯವಾಗುವುದು ಸಾಹಿತ್ಯಲೋಕದಿಂದ ಮಾತ್ರ. ಸಾಹಿತ್ಯಕ್ಕೆ ಮೂಲದ್ರವ್ಯ ಸಿಗುವುದು ನಾವು ಬದುಕಿ ಬಾಳಿದ ಎಳವೆಯಿಂದ ನಡೆದು ಬಂದ ನಿಜ ಜೀವನದಲ್ಲಿ. ಅಸ್ಪ್ರಶ್ಯತೆ ನಮ್ಮ ನಡುವೆ ಹೇಗೆ ಇದೆ, ನಮ್ಮ ಎಳವೆ ಹೇಗಿರುತ್ತದೋ ಅದೇ ನಮ್ಮ ಮುಂದಿನ ಜೀವನಕ್ಕೆ ಮಾರ್ಪಾಡಾಗಬಹುದಾದ ವಿಚಾರಗಳಿರುತ್ತದೆ ಎಂದು ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಪ್ರಭಾಕರ ಶಿಶಿಲ ಅಭಿಪ್ರಾಯಪಟ್ಟರು.
ಶಿಶಿಲ ದೇವಳದಲ್ಲಿ ಸೋಮವಾರ ನಡೆದ ಬೆಳ್ತಂಗಡಿ ತಾಲೂಕು 13ನೇ ಸಾಹಿತ್ಯ ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣದಲ್ಲಿ ಮಾತನಾಡಿದರು. ನೇತ್ರಾವತಿ ನದಿ ತಿರುಗಿಸುವಿಕೆಗೆ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಿಂದಲೂ ವಿರೋಧ ವ್ಯಕ್ತಪಡಿಸಲೇಬೇಕಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಲೋಕದ ಅನಾವರಣವಾಗಿ ವಿಜೃಂಭಿಸಿದೆ. ಸಾಹಿತಿಗಳು ನೇರವಾಗಿ ಬರೆದಲ್ಲಿ ಒಮ್ಮೊಮ್ಮೆ ಅದು ಬಹಳ ದೊಡ್ಡ ನಿಷ್ಠುರ ಸೃಷ್ಟಿಗೂ ಕಾರಣವಾಗುತ್ತದೆ. ಬರೆವಣಿಗೆಯನ್ನು ನಾವು ಎಚ್ಚರದಿಂದ ಮಾಡಬೇಕಾಗುತ್ತದೆ. ವ್ಯವಸ್ಥೆಯ ಪರವಾಗಿ ಬರೆಯದೇ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಗುರುತಿಸುವ ಕಾರ್ಯ ಸಾಹಿತ್ಯ ಲೋಕದಿಂದ ಆಗಬೇಕು ಎಂದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ ನಮ್ಮ ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲೂ ಇರುವ ಜನಪದ ವಿದ್ವಾಂಸರು, ಹಲವು ಕ್ಷೇತ್ರಗಳಲ್ಲಿ ಸಾಧನೆಗೈದವರೂ ನಮ್ಮದೇ ಆದ ಸಂಸ್ಕೃತಿಯ ಮೂಲ ಸ್ವರೂಪಿಗಳು. ಎಲೆಮರೆಯಕಾಯಂತೆ ಅನೇಕರು ಇದ್ದು ಸಾಹಿತ್ಯ ಪರಿಷತ್‌ನ ಮೂಲಕ ಇಂಥವರನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಹರಿಕಥಾ ಸಾಹಿತ್ಯ ಕ್ಷೇತ್ರದಲ್ಲಿ ಸಾಧಕರಾದ ಲಕ್ಷ್ಮಣ ದಾಸದ ವೇಲಣ್ಕರ್, ಶಿಕ್ಷಣ ಕ್ಷೇತ್ರದ ಲಿಯೋ ಡಿಸೋಜ ಕೊಕ್ಕಡ, ಮಹಿಳಾ ಸಾಧಕಿ ಆನಂದಿ ಟೀಚರ್, ಜ್ಯೋತಿಷ್ಯಶಾಸ್ತ್ರ, ವೇದ ಪಂಡಿತ ಕಂಬಳಿ ರಾಮಕೃಷ್ಣ ಖಾಡಿಲ್ಕರ್, ನಾಟಿ ವೈದ್ಯೆ ರುಕ್ಮಿಣಿ ಬದ್ರಿಜಾಲು, ಜಾನಪದ ನಾರ್ಣ ನಲ್ಕೆ, ಉತ್ತಮ ಸರ್ಕಾರಿ ಸೇವೆಗಾಗಿ ಶಂಭು ಶರ್ಮ, ಸಮಾಜ ಸೇವೆಗಾಗಿ ಹಸನಬ್ಬ ಗೇರುಕಟ್ಟೆ ಮುಂತಾದ ಸಾಧಕರನ್ನು ಗೌರವಿಸಲಾಯಿತು.
ಸನ್ಮಾನಿತ ಹರಿದಾಸ್ ಲಕ್ಷ್ಮಣ್‌ದಾಸ್ ಲೇಲಣ್ಕರ್ ಮಾತನಾಡಿ, ಹಸಿವು ಮತ್ತು ತೃಷೆ ಇದ್ದಾಗ ಮಾತ್ರ ಸಾಹಿತ್ಯವೂ ಸೇರಿದಂತೆ ಸಂಸ್ಕೃತಿಗಳು ಜೀವಂತವಿರಲು ಸಾಧ್ಯ. ಸತ್ಯ ಸಾಕ್ಷಾತ್ಕಾರಗೊಂಡವ ಮಾತ್ರ ನಿಜವಾದ ಕವಿಯಾಗುತ್ತಾನೆ ಎಂದರು. ಕಸಾಪ ಜಿಲ್ಲಾ ಕಾರ್ಯದರ್ಶಿ ಡಾ.ಎಂ.ಪಿ. ಶ್ರೀನಾಥ್ ಸ್ವಾಗತಿಸಿದರು. ಕೆ.ಜಿ. ಗೋಖಲೆ ವಂದಿಸಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಉಪನ್ಯಾಸಕರಾದ ದಿವಾ ಕೊಕ್ಕಡ ನಿರೂಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement