ಪೂಜಾರಿ ಗುಂಪು ವಿರುದ್ಧ ಹಾರಿಹಾಯ್ದ ಮೊಯ್ಲಿ ಬಣ
ಮಂಗಳೂರು: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಮೇಯರ್ ಆಯ್ಕೆ ಕುರಿತ ಕಾರ್ಪೊರೇಟರ್‌ಗಳ ಪೂರ್ವಭಾವಿ ಸಭೆಯಲ್ಲಿ ಎತ್ತಿನಹೊಳೆ ವಿಚಾರದಲ್ಲಿ ಮೊಯ್ಲಿ ಬಣದ ಕಾರ್ಪೊರೇಟರ್‌ಗಳು ಪೂಜಾರಿ ಬಣ ಪರಸ್ಪರ ವಾಗ್ದಾಳಿ ನಡೆಸಿದರು. ಒಂದು ಹಂತದಲ್ಲಿ ಕಾರ್ಪೊರೇಟರ್‌ಗಳಾದ ಭಾಸ್ಕರ ಮೊಯ್ಲಿ ಮತ್ತು ಅಶೋಕ್ ಡಿ.ಕೆ. ಹಿರಿಯ ಕಾಂಗ್ರೆಸಿಗ ವಿಜಯಕುಮಾರ್ ಶೆಟ್ಟಿ ಮೇಲೆ ಹಲ್ಲೆಗೂ ಮುಂದಾದ ರು.
ಉಸ್ತುವಾರಿ ಸಚಿವ ರಮಾನಾಥ ರೈ ಈ ಘಟನೆಗಳಿಗೆ ಸಾಕ್ಷಿಯಾದರು.
ಸಭೆ ಉದ್ದೇಶಿಸಿ ಆರಂಭದಲ್ಲಿ ರಮಾನಾಥ ರೈ ಮಾತನಾಡಿದರು. ಬಳಿಕ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಮಾತಿಗೆ ಮುಂದಾದರು. ಆಗ ಕಾರ್ಪೊರೇಟರ್‌ಗಳಾದ ಭಾಸ್ಕರ ಮೊಯ್ಲಿ ಮತ್ತು ಅಶೋಕ್ ಡಿ.ಕೆ. ವೇದಿಕೆ ಮುಂಭಾಗಕ್ಕೆ ಬಂದು ಶೆಟ್ಟರ ವಿರುದ್ಧ ಆಕ್ರೋಶ ಹೊರ ಹಾಕಿದರು.
ಸರ್ಕಾರ ವಿರುದ್ಧ ಕೆಲಸ ಮಾಡಿದ್ದಾರೆ. ಎತ್ತಿನಹೊಳೆ ಪ್ರತಿಭಟನೆ ನೆಪದಲ್ಲಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿಗೆ ಚಪ್ಪಲಿ ಹಾರ ಹಾಕಿಸಿದ್ದಾರೆ. ಅವರು ಮಾತನಾಡಬಾರದು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ತೋಳೇರಿಸಿ ಅಬ್ಬರಿಸಿದರು. ಇದಕ್ಕೆ ಕ್ಯಾರೇ ಅನ್ನದ ಹಿರಿಯ ಕಾಂಗ್ರೆಸಿಗ ವಿಜಯಕುಮಾರ್ ಶೆಟ್ಟಿ ತಾವೂ ತೋಳೇರಿಸಿಕೊಂಡು ಮುಂದೆ ಬಂದರು. ಇವರನ್ನು ಹಿಡಿಯಲು ನಾಲ್ಕು ಮಂದಿ ಅತ್ತ ಮೊಯ್ಲಿ ಬೆಂಬಲಿಗರನ್ನು ಹಿಡಿಯಲು ನಾಲ್ಕು ಮಂದಿ ಇತ್ತ ಧಾವಿಸಿದರು. ಚುನಾವಣೆ ಕುರುಕ್ಷೇತ್ರಕ್ಕೆ ಮುನ್ನ ಜಿಲ್ಲಾ ಕಾಂಗ್ರೆಸ್ ಕಚೇರಿ ಪೂಜಾರಿ ಮತ್ತು ಮೊಯ್ಲಿ ದಾಯಾದಿಗಳ ಕುರುಕ್ಷೇತ್ರವಾಗಿ ಪರಿಣಮಿಸಿತ್ತು.
'ನಾವು ಯಾರಿಗೂ ಪ್ರಚೋದನೆ ನೀಡಿಲ್ಲ, ಯಾರಲ್ಲಿಯೂ ಮೊಯ್ಲಿಗೆ ಚಪ್ಪಲಿ ಹಾರ ಹಾಕಿ ಹೇಳಿಲ್ಲ. ಮೊತ್ತ ಮೊದಲ ಬಾರಿಗೆ ಜಿಲ್ಲೆಯಲ್ಲಿ ಜನ ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸಿದ್ದಾರೆ' ಎಂದು ಶೆಟ್ಟರು ಸಮಜಾಯಿಷಿ ನೀಡಿದರು. ಇದಕ್ಕೆ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆಕ್ಷೇಪಿಸಿದರು. ಇಡೀ ಹೋರಾಟದ ನೇತೃತ್ವ ವಹಿಸಿಕೊಂಡವರಿಗೆ ಇದು ಗೊತ್ತಿದೆ ಎಂದು ವಾದಿಸಿದರು.
ಆಗ ಮೊಯ್ಲಿ ಬೆಂಬಲಿಗ ಇಬ್ಬರು ಕಾರ್ಪೊರೇಟರ್‌ಗಳು ಮುಂದೊತ್ತಿ ಬಂದು ರಾಜಿನಾಮೆಗೆ ಒತ್ತಾಯಿಸಿ, ಸಭೆಯಲ್ಲಿ ವಿಜಯಕುಮಾರ್ ಶೆಟ್ಟರಿಗೆ ಮಾತನಾಡಲು ಅವಕಾಶ ನೀಡಬಾರದು ಎಂದು ಮತ್ತೆ ಆಗ್ರಹಿಸಿದರು. ಮಾಜಿ ಶಾಸಕರಿಗೆ ಅವಮಾನ ಮಾಡಬಾರದು ಮಾತಿಗೆ ಅವಕಾಶ ನೀಡಬೇಕು ಎಂದು ಕಾರ್ಪೊರೇಟರ್ ಪುರುಷೋತ್ತಮ ಚಿತ್ರಾಪು ವಿನಂತಿಸಿದರು.
ಈಗ ಬಿಸಿಯಾಗುವ ಸರದಿ ಉಸ್ತುವಾರಿ ಸಚಿವ ರಮಾನಾಥ ರೈಗಳದ್ದು. 'ಮೇಯರ್ ಆಯ್ಕೆ ಬೇಡ ಅಂದರೆ ನಾನು ಎದ್ದು ಹೋಗುತ್ತೇನೆ ನೀವೇ ಮಾಡಿ' ಎಂದು ಗಟ್ಟಿ ಸ್ವರದಲ್ಲಿ ಗದರಿ ನಿಂತರು. ತಕ್ಷಣ ತಹಬದಿಗೆ ಬಂತು. ತಕ್ಷಣ ತಣ್ಣಗಾದ ರೈ ಎಲ್ಲರ ಪರವಾಗಿ ಕ್ಷಮೆಯಾಚಿಸುತ್ತೇನೆ ಎಂದು ಗಲಾಟೆಗೆ ಮಂಗಳ ಹಾಡಿದರು.