ಬೈಕ್ ತಡೆದು ಅತ್ಯಾಚಾರ ಯತ್ನ
ಉಪ್ಪಿನಂಗಡಿ: ದೇವಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ದಂಪತಿ ಮೇಲೆ ಹಲ್ಲೆಗೆ ಮುಂದಾಗಿ, ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಶಿಬಾಜೆ ಗ್ರಾಮದಲ್ಲಿ ನಡೆದಿದೆ. ಮಹಿಳೆಯ ಸಹಾಯಕ್ಕೆ ಧಾವಿಸಿ ಬಂದ ಸ್ಥಳೀಯ ನಿವಾಸಿ ಮಹಿಳೆಯ ಮೇಲೂ ದುಷ್ಕರ್ಮಿಗಳು ಮಾನಭಂಗಕ್ಕೆ ಯತ್ನಿಸಿದ್ದಾರೆ. ಶಿಬಾಜೆಯ ನಿವಾಸಿ ಪತ್ನಿ ಜತೆ ಉತ್ಸವದಲ್ಲಿ ಪಾಲ್ಗೊಂಡು ತಡರಾತ್ರಿ ಬೈಕ್ನಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಕುರುಂಜತೋಡು ಎಂಬಲ್ಲಿ ಮೂವರು ಆರೋಪಿಗಳು ಅವರನ್ನು ಅಡ್ಡಗಟ್ಟಿದರು. ಪತಿ ಬೈಕ್ನೊಂದಿಗೆ ತಪ್ಪಿಸಿಕೊಂಡಾಗ ಕೆಳಗೆ ಬಿದ್ದ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರು. ಸಹಾಯಕ್ಕೆ ಕೂಗಿಕೊಂಡಾಗ ಸ್ಥಳೀಯ ದಲಿತ ಮಹಿಳೆ ಆಗಮಿಸಿದ್ದು, ಆರೋಪಿಗಳು ಆಕೆಗೆ ಜಾತಿ ನಿಂದನೆ ಮಾಡಿ ಆಕೆಯ ಮೇಲೂ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ. ಗಾಯಗೊಂಡ ಮಹಿಳೆ, ಪತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ನಾಪತ್ತೆ
ಕಾಪು: ಕಟಪಾಡಿ ಏಣಗುಡ್ಡೆ ಗ್ರಾಮದ ತಾರಾ ಎಂಬವರ ಮಗಳಾದ ಪ್ರಜ್ಞಾ (21) ಎಂಬಾಕೆ ನಿಶ್ಚಿತಾರ್ಥವೊಂದಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋದವಳು ಇದುವರೆಗೂ ವಾಪಾಸ್ ಮನೆಗೆ ಬಾರದ ಕುರಿತು ಕಾಪು ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಅಪಘಾತ; ಸವಾರ ಗಾಯ
ಕಾರ್ಕಳ: ಬೈಕಿಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಕಸಬ ಗ್ರಾಮದ ಶಿವತಿಕೆರೆ ಎಂಬಲ್ಲಿ ಭಾನುವಾರ ನಡೆದಿದೆ. ಗಾಯಗೊಂಡವರನ್ನು ರಮೇಶ ಆಚಾರ್ಯ ಎಂದು ಗುರುತಿಸಲಾಗಿದೆ. ಟೆಂಪೋ ಚಾಲಕ ಲ್ಯಾನ್ಸಿ ಮೆನೇಜಸ್ ವೇಗದ ಚಾಲನೆ ಅಪಘಾತಕ್ಕೆ ಕಾರಣ ಎಂದು ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ರಸ್ತೆ ದುರಂತ; ಮಹಿಳೆ ಗಾಯ
ಕಾರ್ಕಳ: ಕುಕ್ಕುಂದೂರು ಗ್ರಾಮದ ಪಿಲಿಚಾವುಂಡಿ ದೈವಸ್ಥಾನದ ಬಳಿ ಬಸ್ಸೊಂದು ಕಾರಿಗೆ ಡಿಕ್ಕಿ ಹೊಡೆದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ಗಾಯಗೊಂಡವರು ಲತಾ. ಆರೋಪಿ ಬಸ್ ಚಾಲಕ ಜಗನ್ನಾಥ ಬಸ್ಸನ್ನು ವೇಗವಾಗಿ ಚಲಾಯಿಸಿ ಬಂದು ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾರೆ. ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಡಿಕ್ಕಿ; ಪಾದಚಾರಿಗೆ ಗಾಯ
ಉಡುಪಿ: ನಿಟ್ಟೂರು ಜಂಕ್ಷನ್ ಬಳಿ ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಬುಧವಾರ ನಡೆದಿದೆ. ಪುಲ್ಲರಪ್ಪ ಗಾಯಾಳು. ಮುರುಗೇಶ್ ಪಿ. ನೀಡಿದ ದೂರಿನಂತೆ ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ
ಕಾರ್ಕಳ: ಇಲ್ಲಿನ ನೂರಾಲ್ಬೆಟ್ಟು ಗ್ರಾಮದ ಕಂಪೆಟ್ಟು ಕುದುರೆಮುಖ ಅಭಯಾರಣ್ಯದಲ್ಲಿ ಅಳವಡಿಸಿದ್ದ ಸುಮಾರು 20,000 ಮೌಲ್ಯದ ಕಬ್ಬಿಣದ ಗೇಟು ಕಳವು ಪ್ರಕರಣ ಮಂಗಳವಾರ ನಡೆದಿದೆ. ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ನೇಣಿಗೆ ಶರಣು
ವಿಟ್ಲ: ತಂದೆಯ ಅನಾರೋಗ್ಯದಿಂದ ಮಾನಸಿಕವಾಗಿ ಮನನೊಂದ ಪುತ್ರ ನೇಣುಬಿಗಿದು ಆತ್ಮಹತ್ಯೆ ಮಾಡಿದ ಘಟನೆ ಕೊಳ್ನಾಡು ಗ್ರಾಮದ ಕುಳಾಲು ತಡೆಂಗಳದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಕುಡ್ತಮುಗೇರು ಕುಳಾಲು ಸಮೀಪದ ತಡೆಂಗಳ ನಿವಾಸಿ ತಿಮ್ಮಪ್ಪ ಶೆಟ್ಟಿ ಪುತ್ರ ಪ್ರಕಾಶ್ ಶೆಟ್ಟಿ(31) ಮಂಗಮನೆಯ ಮಹಡಿಯ ಪಕ್ಕಾಸಿಗೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧ ನಾಪತ್ತೆ: ದೂರು
ವಿಟ್ಲ: ವೃದ್ಧರೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿ ಹೋದ ಅವರು ಮಾರ್ಚ್ 10ರಿಂದ ನಾಪತ್ತೆಯಾಗಿರುವುದಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ. ಇಡ್ಕಿದು ಗ್ರಾಮದ ಮಿತ್ತೂರು ನಿವಾಸಿ ಕೃಷ್ಣ ಯಾನೆ ಮಾಹಿಲ (79) ಕಳೆದ ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಾರ್ಚ್ 10ರಂದು ಅವರು ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಹೋದವರು ಮರಳಿ ಬಾರದೇ ನಾಪತ್ತೆಯಾಗಿದ್ದಾರೆ. ವಿಟ್ಲ, ಪುತ್ತೂರು ಮೊದಲಾದ ಆಸ್ಪತ್ರೆಗಳಲ್ಲಿ ಅವರನ್ನು ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಅವರ ಪತ್ನಿ ಸುಂದರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.