ಲೋಕಸಭೆ ಚುನಾವಣೆ: ಕಾಂಗ್ರೆಸ್‌ಗೆ ಮೂವರು ವಕ್ತಾರರ ನೇಮಕ
ಮಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಜಿಲ್ಲಾದ್ಯಂತ ಪಾದಯಾತ್ರೆ ನಡೆಸಲಿದೆ. ಕೆಪಿಸಿಸಿ ನಿರ್ದೇಶನದಂತೆ ಮೂವರು ವಕ್ತಾರರನ್ನು ನೇಮಿಸಲಾಗುವುದು ಎಂದು ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿದರು. ಕಳ್ಳಿಗೆ ತಾರಾನಾಥ ಶೆಟ್ಟಿ, ಐವನ್ ಡಿಸೋಜ, ಶಾಹುಲ್ ಹಮೀದ್ ಅವರನ್ನು ವಕ್ತಾರನ್ನಾಗಿ ನೇಮಿಸಲಾಗಿದೆ ಎಂದು ಕೋಡಿಜಾಲ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಪಾದಯಾತ್ರೆ ಮಂಗಳೂರು ದಕ್ಷಿಣ ಮತ್ತು ಉತ್ತರದಲ್ಲಿ ಮಾ.14ರಂದು ನಡೆಯಲಿದೆ. ಕೋಮು ಸೌಹಾರ್ದಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು.
ನಾವೇ ವರ್ಗಾಯಿಸಿದ್ದು:
ಕಲ್ಲಡ್ಕ ಘಟನೆ ಪೊಲೀಸ ವೈಫಲ್ಯ. ಹಿರಿಯ ಅಧಿಕಾರಿಗಳು ಎಲ್ಲ ಉತ್ತಮರಿದ್ದಾರೆ. ಕೆಳ ಹಂತದ ಪೊಲೀಸರು ಕೆಲಸ ಮಾಡಿಲ್ಲ. ಅದಕ್ಕಾಗಿ ನಾವು ಈಗಾಗಲೆ ವರ್ಗಾವಣೆ ಮಾಡಿಸಿದ್ದೇವೆ. ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಉಸ್ತುವಾರಿ ಸಚಿವರ ರಾಜೀನಾಮೆ ಕೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೋಡಿಜಾಲ್, ಈಶ್ವರಪ್ಪಗೆ ತಾನು ಏನು ಮಾತನಾಡುತ್ತಿದ್ದೇನೆ ಎನ್ನುವುದು ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಪಿ.ವಿ. ಮೋಹನ್, ಕೃಪಾ ಆಳ್ವ, ಟಿ.ಕೆ.ಸುಧೀರ್ ಇದ್ದರು.
ಮಾನವ ಹಕ್ಕು ಆಯೋಗ ಸದಸ್ಯರ ಪ್ರವಾಸ
ಮಂಗಳೂರು: ರಾಜ್ಯ ಮಾನವ ಹಕ್ಕು ಆಯೋಗ ಸದಸ್ಯ ಸಿ.ಜಿ.ಹುನಗುಂದ, ರಿಜಿಸ್ಟ್ರಾರ್ ಕೆ.ಎಚ್.ಮಲ್ಲೇಶಪ್ಪ 16ರಂದು ಮಂಗಳೂರಿಗೆ ಆಗಮಿಸುವರು. ಸಂಜೆ 5ಕ್ಕೆ ನಗರದಲ್ಲಿ ನಡೆಯುವ ಭಾರತ ಮಾನವ ಹಕ್ಕು ಒಕ್ಕೂಟದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಅಹವಾಲು ಸ್ವೀಕಾರ ಮುಂದೂಡಿಕೆ
ಮಂಗಳೂರು: ಲೋಕಾಯುಕ್ತರು ದ.ಕ.ಜಿಲ್ಲೆಯಲ್ಲಿ 28 ಮತ್ತು 29ರಂದು ನಡೆಸಲುದ್ದೇಶಿಸಿದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಚುನಾವಣೆ ಹಿನ್ನೆಲೆಯಲ್ಲಿ ತಾತ್ಕಾಲಿಕ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.