ಸರ ಕಳವು; ಇಬ್ಬರ ಸೆರೆ
ಬಂಟ್ವಾಳ: ಕಳೆದ ವರ್ಷ ತಾಲೂಕಿನ ಸೊರ್ನಾಡು ಭಂಡಸಾಲೆ ಎಂಬಲ್ಲಿ ಒಂಟಿ ಮಹಿಳೆಯ ಕತ್ತಿನಿಂದ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಬ್ಬರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಗೂಡಿನಬಳಿ ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ವಾಸ್ತವ್ಯವಿರುವ ಮಹಮ್ಮದ್ ರಫೀಕ್ (25) ಮತ್ತು ಉಪ್ಪಳ ಪೈವಳಿಕೆಯ ನಿವಾಸಿ ಸಾಹಿಲ್ (22) ಬಂಧಿತರು. ಆರೋಪಿಗಳನ್ನು ಕೆಲದಿನಗಳ ಹಿಂದೆ ಮಂಗಳೂರಿನ ಪಾಂಡೇಶ್ವರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ 2013ರ ಜುಲೈ 26ರಂದು ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸೊರ್ನಾಡಿನ ಭಂಡಸಾಲೆ ಬಳಿ ನಡೆದುಕೊಂಡು ಹೋಗುತ್ತಿದ್ದ ಸ್ಥಳೀಯ ಮಹಿಳೆ ಲಿಲ್ಲಿ ಬರ್ಬೋಜಾ ಎಂಬವರ ಕತ್ತಿನಿಂದ ನಾಲ್ಕು ಪವನ್ನ ಚಿನ್ನದ ಸರ ಕಸಿದು ಬಳಿಕ ತಾವು ಬಂದಿದ್ದ ಬೈಕನ್ನು ಅಲ್ಲೇ ಬಿಟ್ಟು ಪರಾರಿಯಾದ ಬಗ್ಗೆ ಬಾಯ್ಬಿಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಬ್ಬರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದು, ದೋಚಲಾದ ಚಿನ್ನವನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಟೆಂಪೋ ಡಿಕ್ಕಿ; ವ್ಯಕ್ತಿ ಸಾವು
ಕುಂದಾಪುರ: ಕೋಟೇಶ್ವರ ಗ್ರಾಮದ ಗಣೇಶ್ ಹಾರ್ಡ್ವೇರ್ ಸಮೀಪದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬರಿಗೆ ಟೆಂಪೋ ಡಿಕ್ಕಿಯಾಗಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಶೇಕ್ ಅನ್ವರ್ (40) ಮೃತರು. ಟೆಂಪೋ ಚಾಲಕ ಜನಾರ್ದನ್ ಕುಂದಾಪುರ ಕಡೆಯಿಂದ ಕೋಟ ಕಡೆಗೆ ಅತಿ ವೇಗವಾಗಿ ಚಲಾಯಿಸಿಕೊಂಡು ಬಂದು ರಸ್ತೆ ದಾಟಲು ನಿಂತಿದ್ದ ಶೇಕ್ ಅನ್ವರ್ ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಶೇಖ್ ಅನ್ವರ್ ಅವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಕೋಟೇಶ್ವರದ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಉಸಿರಾಟ ನಿಂತ ಕಾರಣ ವಾಪಾಸು ಕುಂದಾಪುರ ಸರ್ಕಾರಿ ಸ್ಪತ್ರೆಗೆ ಕರೆದುಕೊಂಡು ಬಂದಾಗ ಪರೀಕ್ಷಿಸಿದ ವೈದ್ಯರು ಅನ್ವರ್ ಮೃತಪಟ್ಟಿರುವುದನ್ನು ದೃಢಪಡಿಸಿದರು. ಈ ಬಗ್ಗೆ ಮೊಹಮ್ಮದ್ ನಯಾಜ್ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಿಷ ಸೇವಿಸಿದ್ದ ವ್ಯಕ್ತಿ ಸಾವು
ಬ್ರಹ್ಮಾವರ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಹೆಗ್ಗುಂಜೆ ಗ್ರಾಮದಲ್ಲಿ ಬುಧವಾರ ನಡೆದಿದೆ. ತಮ್ಮಯ್ಯ ನಾಯ್ಕ (62) ಮೃತರು. ಇವರು ತಮ್ಮ ಮಗಳಿಗೆ ಮದುವೆಯಾಗಿಲ್ಲ ಎಂಬ ಚಿಂತೆಯಿಂದ ಮನನೊಂದು ಸೋಮವಾರ ಮನೆಯ ಸಮೀಪದ ಗುಡ್ಡೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿದ್ದರು. ತೀವ್ರ ಅಸ್ವಸ್ಥ ಸ್ಥಿತಿಯ್ಲಲಿದ್ದ ಇವರನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾರೆ. ಈ ಬಗ್ಗೆ ಪ್ರಶಾಂತ ನಾಯ್ಕ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.