ಇಂದು ಬೆಳ್ಳಿಹಬ್ಬ ಸಮಾರಂಭ
ಮಂಗಳೂರು: ಡಾ.ಎಂ.ವಿ.ಶೆಟ್ಟಿ ಫಿಸಿಯೋಥೆರಪಿ ಕಾಲೇಜಿನ 25ನೇ ವರ್ಷದ ಬೆಳ್ಳಿಹಬ್ಬ ಆಚರಣೆ ಮಾ.14ರಂದು ನಗರದ ಹೊಟೇಲ್ ಓಷನ್ ಪರ್ಲ್ ಸಭಾಂಗಣದಲ್ಲಿ ಜರುಗಲಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಳ್ಳಿಹಬ್ಬ ಸಲಹಾ ಸಮಿತಿ ಸದಸ್ಯ ಡಾ.ರಂಜಿತ್ ಶೆಟ್ಟಿ, ಬೆಳಗ್ಗೆ 9ಕ್ಕೆ ಆರೋಗ್ಯ ಸಚಿವ ಯು.ಟಿ.ಖಾದರ್ ಉದ್ಘಾಟಿಸುವರು. ಡಾ.ಎಂ.ವಿ.ಶೆಟ್ಟಿ ಸ್ಮಾರಕ ಟ್ರಸ್ಟ್ ಸ್ಥಾಪಕ ಕಾರ್ಯದರ್ಶಿ ಡಾ.ಎಂ.ರಾಮಗೋಪಾಲ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ಡಾ.ಡಿ.ಪ್ರೇಮ ಕುಮಾರ್ ದಿಕ್ಸೂಚಿ ಭಾಷಣ ಮಾಡುವರು. ಟ್ರಸ್ಟಿ ಡಾ.ರಂಜಿತ್ ಶೆಟ್ಟಿ, ಆಡಳಿತಾಧಿಕಾರಿ ಪ್ರೊ.ಜಿ.ಗೋವಿಂದ ನಾಯ್ಕ ಅತಿಥಿಯಾಗಿ ಆಗಮಿಸುವರು. ಬೆಳ್ಳಿಹಬ್ಬ ಅಂಗವಾಗಿ ಅದೇ ದಿನ ಕಾವೂರಿನ ಕಾಲೇಜು ಕ್ಯಾಂಪಸ್‌ನಲ್ಲಿ ರಕ್ತದಾನ ಶಿಬಿರ, ವೆನ್ಲಾಕ್ ಆಸ್ಪತ್ರೆ ರೋಗಿಗಳಿಗೆ ಉಚಿತ ಹಣ್ಣುಹಂಪಲು ವಿತರಿಸಲಾಗುವುದು. ಇದಲ್ಲದೆ ವರ್ಷಪೂರ್ತಿ ವಿವಿಧ ವಿಚಾರ ಸಂಕಿರಣ, ರಾಷ್ಟ್ರ ಮಟ್ಟದ ಫಿಸಿಯೋ ಕಲ್ಚರಲ್ ಫೆಸ್ಟ್, ರಾಷ್ಟ್ರೀಯ ಫಿಸಿಯೋ ಸ್ಪೋರ್ಟ್ಸ್ ಮೀಟ್, ರಾಷ್ಟ್ರೀಯ ಫಿಸಿಯೋ ವೀಕ್ ಕಾರ್ಯಕ್ರಮ ನಡೆಯಲಿದೆ. ಬೆಳ್ಳಿಹಬ್ಬ ಸಮಾರೋಪ ನ.23ರಂದು ನಡೆಯಲಿದೆ ಎಂದರು.