ಜಿಲ್ಲೆಯಲ್ಲಿ ರಾಜಕೀಯ ಬ್ಯಾನರ್ಗೆ ನಿಷೇಧ
ಮಂಗಳೂರು: ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಜಿಲ್ಲೆಯಾದ್ಯಂತ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ನಾಯಕರ ಬ್ಯಾನರ್ನ್ನು ಚುನಾವಣೆ ಆಯೋಗ ನಿಷೇಧಿಸಿದೆ.
ರಾಜಕೀಯ ನಾಯಕರ ಹೆಸರಲ್ಲಿ ಶುಭ ಕೋರುವ, ಸ್ವಾಗತ ಬಯಸುವ ಬ್ಯಾನರ್, ಫ್ಲೈಕ್ಸ್ ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ. ಜಾತ್ರೋತ್ಸವ, ಉರೂಸ್, ಚರ್ಚ್ ಉತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೂಡ ರಾಜಕೀಯ ನಾಯಕರ ಚಿತ್ರ, ಪಕ್ಷ ಚಿನ್ನೆಯ ಬ್ಯಾನರ್ ಪ್ರದರ್ಶಿಸುವಂತಿಲ್ಲ. ಧಾರ್ಮಿಕ ಸಂಸ್ಥೆಗಳ ಆಶ್ರಯದಲ್ಲಿ ರಾಜಕೀಯ ಚಟುವಟಿಕೆಗೆ ಅವಕಾಶವಿಲ್ಲ. ಸಭೆ ನಡೆಸುವುದು, ಚಂದಾ ವಸೂಲಿ ಮಾಡುವುದು, ಆರೋಪಿ/ಅಪರಾಧಿಗೆ ಆಶ್ರಯ ನೀಡುವುದು, ಆಯುಧ ದಾಸ್ತಾನು, ನಿಯಮಬಾಹಿರ ಸರಕು ದಾಸ್ತಾನು, ಧಾರ್ಮಿಕ/ಸಾಮರಸ್ಯ ಕೆಡಿಸುವ ಮತ್ತು ಭಿನ್ನ ಸಮುದಾಯ ಮಧ್ಯೆ ದ್ವೇಷ, ಅಸೂಯೆ ಸೃಷ್ಟಿಸುವ ಚಟುವಟಿಕೆ ನಡೆಸುವುದು, ದೇಶದ ಗೌರವಕ್ಕೆ ಧಕ್ಕೆ ತರುವ ಚಟುವಟಿಕೆ ನಿಷೇಧಿಸಲಾಗಿದೆ. ಈ ಅಪರಾಧ ಸಾಬೀತಾದರೆ 5 ವರ್ಷ ಜೈಲುವಾಸ ಮತ್ತು ರು. 10 ಸಾವಿರ ದಂಡ ವಿಧಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರಪತ್ರ ಮುದ್ರಣ ಸ್ಪಷ್ಟನೆ: ಲೋಕಸಭಾ ಚುನಾವಣೆ ಪ್ರಚಾರಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷಗಳು ಆಡಿಯೋ ಮತ್ತು ವೀಡಿಯೋ ಪ್ರಸಾರ ಸಾಧನೆಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಮತ್ತು ಎಂಸಿಎಂಸಿ ಸಮಿತಿಯ ದೃಢಪತ್ರ ಪಡೆದು ಪ್ರಚಾರ ನಡೆಸಬೇಕು. ಆದರೆ ಮುದ್ರಿತ ಪ್ರಚಾರ ಸಾಧನಗಳಿಗೆ ಇವರ ದೃಢಪತ್ರದ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪಿಂಚಣಿ ಅರ್ಜಿ ವಿಳಂಬ: ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಕಂದಾಯ ಇಲಾಖೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿ ವಿತರಣೆ ವಿಳಂಬವಾಗಲಿದೆ. ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಮತ್ತು ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ನಾಗರಿಕರ ಮೇಲೆ ಪ್ರಭಾವ ಬೀರಬಹುದಾದ ಇತರೆ ಸೇವೆಗಳನ್ನು ಸಕಾಲ ಅಧಿನಿಯಮದಡಿ ಬರುವ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ವಿಲೇ ಮಾಡಲು ಸಾಧ್ಯವಾಗುವುದಿಲ್ಲ. ಸಕಾಲ ನಿಯಮದಡಿ ಈ ಆದೇಶ ಹೊರಡಿಸಲಾಗಿದ್ದು, ಇದಕ್ಕೆ ಅಧಿಕಾರಿ ಅಥವಾ ಅಧೀನ ಸರ್ಕಾರಿ ನೌಕರರು ಪರಿಹಾರ ವೆಚ್ಚ ಸಂದಾಯಕ್ಕೆ ಹೊಣೆಗಾರರಾಗುವುದಿಲ್ಲ. ಎಲ್ಲರೂ ಸಹಕರಿಸುವಂತೆ ಜಿಲ್ಲಾಧಿಕಾರಿ ಕೋರಿದ್ದಾರೆ.