ಪ್ರಾರ್ಥನೆಯಿಂದ ಇಷ್ಟಾರ್ಥಸಿದ್ಧಿ: ಪೇಜಾವರ ಶ್ರೀ
ಮೂಲ್ಕಿ: ಭಗವಂತನ ಸನ್ನಿಧಾನದಲ್ಲಿ ಭಕ್ತಿಯಿಂದ ಮಾಡಿದ ಪ್ರಾರ್ಥನೆಯಿಂದ ಇಷ್ಟಾರ್ಥ ಸಿದ್ಧಿಯಾಗುವುದರ ಜತೆ ಭಕ್ತರಲ್ಲಿ ಧಾರ್ಮಿಕ ಭಾವನೆ ಮೂಡಲು ಸಾಧ್ಯ. ಜಾತಿ, ಮತ ಮರೆತು ಸಂಘಟಿತರಾದಾಗ ದೇಶವು ಬಲಿಷ್ಠವಾಗಲು ಸಾಧ್ಯ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಸಸಿಹಿತ್ಲು ಶ್ರೀಭಗವತಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಜರುಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಶ್ರೀ ಭಗವತಿ ಕ್ಷೇತ್ರದ ಚಂದ್ರಹಾಸ್ ಉಳ್ಳಾಲ ಕಾರ್ಯಕ್ರಮ ಉದ್ಘಾಟಿಸಿದರು. ಮುಂಬೈ ಸಂಜೀವಿನಿ ಟ್ರಸ್ಟ್‌ನ ಡಾ. ಸುರೇಶ್ ಎಸ್. ರಾವ್, ಮುಂಬೈ ಉದ್ಯಮಿ ಅಶೋಕ್ ಶೆಟ್ಟಿ, ಜಯ ಸಿ. ಸಾಲ್ಯಾನ್, ಮಂಗಳೂರಿನ ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಆಶಾ ಜ್ಯೋತಿ ರೈ, ಎಂಆರ್‌ಪಿಎಲ್‌ನ ಉಪ ಮಹಾಪ್ರಬಂಧಕಿ ಲಕ್ಷ್ಮೀ ಕುಮಾರನ್, ಉಡುಪಿಯ ಶ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ.ಜಿ. ಶಂಕರ್ ಮುಖ್ಯ ಅತಿಥಿಗಳಾಗಿದ್ದರು.
ಶ್ರೀಭಗವತಿ ಕ್ಷೇತ್ರದ ರವಿ ಯಾನೆ ಕಂಡಪ್ಪ ಕಾರ್ನವರು ಮತ್ತು ಬಾಲಕೃಷ್ಣ ಯಾನೆ ಮಂಜಪ್ಪ ಕಾರ್ನವರು ಅವರನ್ನು ಗೌರವಿಸಲಾಯಿತು. ವಿದ್ವಾನ್ ವೆಂಕಟೇಶ ತಂತ್ರಿ ಎಡಪದವು, ವೇದಮೂರ್ತಿ ಕೃಷ್ಣಮೂರ್ತಿ ಭಟ್ ಹೊಯಿಗೆಗುಡ್ಡೆ, ದೇವಳದ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ, ಅನುವಂಶಿಕ ಮೊಕ್ತೇಸರ ಶ್ರೀನಿವಾಸ್ ಯಾನೆ ಅಪ್ಪು ಪೂಜಾರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಗನ್ನಾಥ ಸಾಲ್ಯಾನ್, ಕಾರ್ಯಾಧ್ಯಕ್ಷ ಲಕ್ಷ್ಮೀಕಾಂತ್ ತೋನ್ಸೆ ಇದ್ದರು.