ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರ್ಯಾಂಪ್ ಮೇಲೆ ಗಣ್ಯರ ನಡಿಗೆ: ಎಲ್ಲರ ಗಮನ ಖಾದಿ ಕಡೆಗೆ

Rashmi Kasaragodu
Updated On : 14 Mar 2014, 12:25 pm

ಮಂಗಳೂರು: ಖಾದಿ ಸೀರೆ, ಪೊಷಾಕು ಧರಿಸಿ ರ್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಾ ನಡೆದವರು ನಗರದ ಗಣ್ಯರು ಇತರೆ ಫ್ಯಾಶನ್ ಶೋಗಿಂತ ತಾವೇನು ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟರು.
ಪುರಭವನದಲ್ಲಿ ಇದೇ ಮೊದಲ ಬಾರಿಗೆ ಮಿಫ್ಟ್ ಕಾಲೇಜು ವತಿಯಿಂದ ಏರ್ಪಟ್ಟ 'ನಮ್ಮ ನಡಿಗೆ, ಖಾದಿಯೆಡೆಗೆ' ಖಾದಿ ಫ್ಯಾಶನ್ ಶೋನಲ್ಲಿ ಗುರುವಾರ ಗಣ್ಯರು ಮಿಂಚಿದ್ದೇ ಮಿಂಚಿದ್ದು. ಸುಮಾರು 10ಕ್ಕೂ  ಹೆಚ್ಚು ದಂಪತಿಗಳು ಜತೆಯಾಗಿ ವೈವಿಧ್ಯಮಯ ಬಣ್ಣದ ಖಾದಿ ಉಡುಪಿನಲ್ಲಿ ವೇದಿಕೆ ಮೇರೆ ಬಂದು ರ್ಯಾಂಪ್‌ನಲ್ಲಿ ನಡೆದಾಗ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ಸುರಿಮಳೆ. ಯುವಕರಿಂದ ತೊಡಗಿ ವೃದ್ಧ ದಂಪತಿ ವರೆಗೆ ರ್ಯಾಂಪ್ ಮೇಲೆ ಹೆಜ್ಜೆ ಇಟ್ಟವರೇ. ಯುವಕರನ್ನೂ ನಾಚಿಸುವಂತೆ ವೃದ್ಧ ದಂಪತಿ ಖಾದಿ ನಡಿಗೆಗೆ ಸಭಾಂಗಣ ಅವಕ್ಕಾಯಿತು. ಪ್ರೇಕ್ಷಕರ ಒತ್ತಾಯ ಮೇರೆಗೆ ಎರಡನೇ ಬಾರಿ ರ್ಯಾಂಪ್ ಮೇಲೆ ನಡೆದರು. ಆ ಬಳಿಕ ಮಿಫ್ಟ್ ಕಾಲೇಜು ವಿದ್ಯಾರ್ಥಿಗಳೂ ಖಾದಿ ಧರಿಸಿ ಫ್ಯಾಶನ್ ಮೆರೆದರು.
ಸಮಾರಂಭದವನ್ನು ಉದ್ಘಾಟಿಸಿದ ಲಯನ್ಸ್ ಜಿಲ್ಲಾ ರಾಜ್ಯಪಾಲ ಕೆ.ಸಿ.ಪ್ರಭು, ದೇಶದ ಸ್ವಾಭಿಮಾನದ ಪ್ರತೀಕ ಖಾದಿ. ಖಾದಿ ವಸ್ತ್ರಧಾರಿಗಳಾಗಿ ನಡಿಗೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಖಾದಿ ವಸ್ತ್ರ ಧರಿಸಲು ಒತ್ತು ನೀಡಬೇಕು ಎಂದು ಹೇಳಿದರು.
ಮಿಫ್ಟ್ ನಿರ್ದೇಶಕ ಎಂ.ಜಿ.ಹೆಗಡೆ ಮಾತನಾಡಿ, ಖಾದಿ ಉದ್ಯಮ ಪ್ರೋತ್ಸಾಹಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಬದುಕಿಗೆ ಖಾದಿ ಆರ್ಥಿಕ ಶಕ್ತಿಯನ್ನು ತುಂಬುತ್ತದೆ. ನಿರುದ್ಯೋಗ ನಿವಾರಣೆಗೆ ಖಾದಿ ವಸ್ತ್ರೋದ್ಯಮಕ್ಕೆ ಬೆಂಬಲ ನೀಡಬೇಕು ಎಂದರು.
ಬರಹಗಾರ ವಿ.ಟಿ.ರಾಜಶೇಖರನ್, ಚಿತ್ರ ನಿರ್ದೇಶಕ ಚಂದ್ರಹಾಸ, ಸಂದೀಪ್ ಮಲಾನಿ, ಉದ್ಯಮಿ ಅಶೋಕ್ ಕುಮಾರ್, ಮಂಗಳೂರು ಆಕಾಶವಾಣಿ ನಿಲಯ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ, ಡಾ.ಶಿವಶರಣ್ ಶೆಟ್ಟಿ, ಸುಹಾಸ್ ರಾವ್, ಪ್ರಾಂಶುಪಾಲೆ ಚಂದ್ರಲೇಖ ಗೌಡ, ವಿದ್ಯಾರ್ಥಿ ಮುಖಂಡ ಕಾರ್ತಿಕ್ ಭಟ್ ವೇದಿಕೆಯಲ್ಲಿದ್ದರು.
ಸುಮಾರು 50ಕ್ಕೂ ಅಧಿಕ ಮಂದಿ ಖಾದಿ ಫ್ಯಾಶನ್ ಶೋದಲ್ಲಿ ಕಾಣಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement