ವಿದ್ಯಾರ್ಥಿ ನಿಲಯದ ದಾರಿಗೆ ಸ್ಥಳೀಯ ವ್ಯಕ್ತಿಯಿಂದ ಅಡ್ಡಿ: ದೂರು
ಬಂಟ್ವಾಳ: ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯಗಳ ದಾರಿಗೆ ಅಡೆತಡೆಗಳನ್ನು ಮಾಡುತ್ತಿರುವ ಸ್ಥಳೀಯ ವ್ಯಕ್ತಿಯೋರ್ವರು ನಿಲಯದ ಎಸ್ಸಿ, ಎಸ್ಟಿ ಸೇರಿದಂತೆ ಓಬಿಸಿ ವಿದ್ಯಾರ್ಥಿಗಳಿಗೆ ನಿರಂತರ ಕಿರುಕುಳ ನೀಡುತ್ತಿರುವ ಬಗ್ಗೆ ಇಲಾಖಾಧಿಕಾರಿಗಳು ಹಾಗೂ ನಿಲಯ ಮೇಲ್ವಿಚಾರಕರು ಪೊಲೀಸರಿಗೆ ದೂರು ನೀಡಿದ ಘಟನೆ ಪಾಣೆಮಂಗಳೂರಿನಲ್ಲಿ ನಡೆದಿದೆ.
ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ಎಂಬಲ್ಲಿ ಸರ್ಕಾರ ಕಾದಿರಿಸಿದ ಜಾಗದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿದ ಮೆಟ್ರಿಕ್ ಪೂರ್ವ ಬಾಲಕ ಹಾಗೂ ಬಾಲಕಿಯರ ಮತ್ತು ಮೆಟ್ರಿಕ್ ನಂತರದ ಬಾಲಕಿಯರ ಮೂರು ವಿದ್ಯಾರ್ಥಿ ನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಈ ಮೂರೂ ವಿದ್ಯಾರ್ಥಿ ನಿಲಯಗಳನ್ನು ಸಂಪರ್ಕಿಸುವ ದಾರಿಯಲ್ಲಿ ಸ್ಥಳೀಯ ವ್ಯಕ್ತಿಯೋರ್ವರು ಕಲ್ಲುಗಳನ್ನಿಟ್ಟು ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ನಿಲಯದ ವಿದ್ಯಾರ್ಥಿಗಳಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ.
ಇದರಿಂದ ನಿಲಯದ ಶಿಥಿಲಾವಸ್ಥೆಯಲ್ಲಿರುವ ಆವರಣ ಗೋಡೆ ಪುನರ್ನಿರ್ಮಾಣ ಕಾಮಗಾರಿ ಕೈಗೊಳ್ಳಲು ಹಾಗೂ ವಿದ್ಯಾರ್ಥಿಗಳಿಗೆ ಆಹಾರ ತಯಾರಿಸಲು ಕಚ್ಚಾ ಸಾಮಗ್ರಿಗಳನ್ನು ತರಲೂ ಕೂಡಾ ತೊಂದರೆಯಾಗಿರುತ್ತದೆ. ಅಲ್ಲದೆ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದಿಂದ ಮಂಜೂರುಗೊಂಡ ಕೊಳವೆ ಬಾವಿ ಕೊರೆಯಲು ಇತ್ತೀಚೆಗೆ ಬೋರ್ವೆಲ್ ಲಾರಿಯವರು ಬಂದಿದ್ದು, ಅವರನ್ನೂ ಕೊಳವೆ ಬಾವಿ ಕೊರೆಯಲು ಬಿಡದೆ ವಾಪಾಸ್ ಕಳಿಸಿದ್ದಾರೆ ಎಂದು ವಿದ್ಯಾರ್ಥಿ ನಿಲಯ ಪಾಲಕರು ಹಾಗೂ ಸಮಾಜ ಕಲ್ಯಾಣಾಧಿಕಾರಿಯವರು ಸ್ಥಳೀಯ ನಿವಾಸಿ ನಾರಾಯಣ ಮಯ್ಯ ಎಂಬವರ ವಿರುದ್ಧ ಪ್ರತ್ಯೇಕವಾಗಿ ಬಂಟ್ವಾಳ ವೃತ್ತ ನಿರೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ.
ಆಹಾರ ಸಾಮಗ್ರಿಗಳನ್ನು ಸಾಗಿಸಲು ನಿಲಯದ ಅಂಗಳಕ್ಕೆ ವಾಹನ ಬರಲು ಬಿಡದ ಹಿನ್ನೆಲೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳೇ ಹೊತ್ತು ತರುತ್ತಿರುವ ಸನ್ನಿವೇಶ ಕಂಡು ಬರುತ್ತಿದೆ. ಇಲ್ಲಿನ ನಿಲಯಕ್ಕೆ ಸಮರ್ಪಕ ನೀರಿನ ಸಂಪರ್ಕವೂ ಇಲ್ಲದೆ ಇದ್ದು, ಹತ್ತಿರದ ಬಾವಿಯಿಂದ ನೀರನ್ನೂ ವಿದ್ಯಾರ್ಥಿಗಳೇ ಹೊತ್ತು ತರುವುದೂ ನಿತ್ಯ ಕಂಡು ಬರುತ್ತಿದೆ.
ಎಫ್ಐಆರ್ ದಾಖಲಿಸದ ಪೊಲೀಸ್: ಇಲ್ಲಿನ ಖಾಸಗಿ ವ್ಯಕ್ತಿಯ ಕಿಡಿಗೇಡಿ ಕೃತ್ಯದಿಂದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಇಷ್ಟೆಲ್ಲಾ ಕಿರುಕುಳ ಅನುಭವಿಸುತ್ತಿರುವ ಬಗ್ಗೆ ಮೇಲಿಂದ ಮೇಲೆ ದೂರು ನೀಡಲಾಗುತ್ತಿದ್ದರೂ ಪೊಲೀಸ್ ಅಧಿಕಾರಿಗಳು ಇದುವರೆಗೂ ಒಂದೇ ಒಂದು ಎಫ್ಐಆರ್ ಕೂಡಾ ದಾಖಲಿಸಿಲ್ಲ ಎಂದು ಆರೋಪಿಸುವ ಸ್ಥಳೀಯರು ನಿಲಯದ ಕೊಳವೆ ಬಾವಿ ಕೊರೆಯಲು ಬಂದ ವೇಳೆ ವಾಪಾಸ್ ಕಳಿಸಿದ ಸಂದರ್ಭ ಸ್ಥಳಕ್ಕಾಗಮಿಸಿದ ಪೊಲೀಸರು ಇದು ನಮಗೆ ಸಂಬಂಧಪಟ್ಟದ್ದಲ್ಲ ಎಂಬಂತೆ ಮರಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಗನವಾಡಿಗೂ ತೊಂದರೆ: ಇದೇ ಸ್ಥಳದಲ್ಲಿ ಅಂಗನವಾಡಿ ಕೇಂದ್ರವೊಂದು ಕಾರ್ಯಾಚರಿಸುತ್ತಿದ್ದು, ಇಲ್ಲಿನ ದಾರಿಯಲ್ಲಿ ಕೆಂಪು ಹಾಗೂ ಇನ್ನಿತರ ಕಲ್ಲುಗಳನ್ನಿಟ್ಟು ಅಡ್ಡಿ ಪಡಿಸಿರುವುದರಿಂದ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸಲೂ ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಪುಟಾಣಿಗಳು ಕಲ್ಲಿನ ಮೇಲೆ ಬಿದ್ದು ಗಾಯಗೊಂಡಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ.
ಇಲ್ಲಿನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಸ್ಥಳೀಯ ಹೋರಾಟಗಾರರಾದ ಇಸ್ಮಾಯಿಲ್ ಬಂಗ್ಲೆಗುಡ್ಡೆ, ಮುಹಮ್ಮದ್ ಬಂಗ್ಲೆಗುಡ್ಡೆ, ಅಬ್ದುಲ್ ಹಮೀದ್, ಇರ್ಫಾನ್, ಕುಂಞ ಬಂಗ್ಲೆಗುಡ್ಡೆ ಎಚ್ಚರಿಸಿದ್ದಾರೆ.