ವಿದ್ಯುತ್ ತಂತಿ ಸ್ಪರ್ಶಿಸಿ ಅಗ್ನಿ ಅವಘಡ: ರಬ್ಬರ್ ತೋಟ ಭಸ್ಮ
ಉಪ್ಪಿನಂಗಡಿ: ನೆಲ್ಯಾಡಿ ಗ್ರಾಮದ ಪಡುಬೆಟ್ಟು ರಾಮಸಾಗು ಎಂಬಲ್ಲಿ ವಿದ್ಯುತ್ ತಂತಿಗಳು ಪರಸ್ಪರ ಸ್ಪರ್ಶಗೊಂಡು ಬೆಂಕಿ ಸೃಷ್ಟಿಯಾದ ಪರಿಣಾಮ 1 ಎಕರೆ ರಬ್ಬರ್ ತೋಟ ಅಗ್ನಿಗಾಹುತಿಯಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಘಟನೆಯಿಂದ ರಾಮಸಾಗು ನಿವಾಸಿ ನೀಲಮ್ಮ ಎಂಬವರಿಗೆ ಸೇರಿದ 3 ವರ್ಷ ಪ್ರಾಯದ ರಬ್ಬರ್ ಮರಗಳು ಸಂಪೂರ್ಣ ಭಸ್ಮವಾಗಿ ರು. 2 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ. ಪುತ್ತೂರಿನಿಂದ ಅಗ್ನಿಶಾಮಕ ದಳದ ಲಾರಿ ಸ್ಥಳಕ್ಕಾಗಮಿಸಿದ್ದರೂ ವಿದ್ಯುತ್ ಇಲ್ಲದ ಕಾರಣ ಲಾರಿಗೆ ನೀರು ತುಂಬಿಸಲು ಸಾಹಸಪಡಬೇಕಾಯಿತು. ಸ್ಥಳೀಯ ಗ್ರಾ.ಪಂ. ಸದಸ್ಯ ರವಿಪ್ರಸಾದ್ ಶೆಟ್ಟಿ ಕೂಡಲೆ ಬದಲಿ ಲೈನ್ನಲ್ಲಿ ವಿದ್ಯುತ್ ನೀಡುವಂತೆ ಮೆಸ್ಕಾಂ ಅಧಿಕಾರಿಗಳಲ್ಲಿ ಮಾತುಕತೆ ನಡೆಸಿ, ಬೇರೆ ಕಡೆ ವಿದ್ಯುತ್ ಪಂಪ್ನಿಂದ ಅಗ್ನಿ ಶಾಮಕದಳದ ಲಾರಿಗೆ ನೀರು ತುಂಬಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಯಿತು. ಇದಕ್ಕೆ ಸಾರ್ವಜನಿಕರೂ ಕೈ ಜೋಡಿಸಿದರು. ನೀಲಮ್ಮ ಮನೆ ಸಮೀಪ ತೋಟದ ನಡುವೆಯೇ ವಿದ್ಯುತ್ ಲೈನ್ ಹಾದುಹೋಗಿದ್ದು, ಕೆಲವೊಮ್ಮೆ ತಂತಿ ತುಂಡಾಗಿ ಬಿದ್ದ ನಿದರ್ಶನವೂ ಇದೆ. ಈ ಲೈನ್ ತೆರವುಗೊಳಿಸುವಂತೆ ಹಲವು ಬಾರಿ ಮೆಸ್ಕಾಂಗೆ ಮನವಿ ನೀಡಿದ್ದರೂ ಸ್ಪಂದನೆ ಸಿಕ್ಕಿಲ್ಲ ಎನ್ನಲಾಗಿದೆ. ಮೆಸ್ಕಾಂನ ನೆಲ್ಯಾಡಿ ವಿತರಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣವನ್ನು ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಭರವಸೆ ನೀಡಿದ್ದಾರೆ.