ಗಿಡಗಂಟಿಗಳ ನಡುವೆ ಅನಾಥ ಬಸದಿ
ಸುಬ್ರಹ್ಮಣ್ಯ: ಪುರಾತನ ಕಾಲದಿಂದಲೂ ದ.ಕ. ಜಿಲ್ಲೆ ಐತಿಹಾಸಿಕ ಸ್ಥಳವೆಂದು ಗುರುತಿಸಿಕೊಂಡಿದೆ. ಅದರಂತೆ ಜೈನಧರ್ಮವೂ ಜಿಲ್ಲೆಯ ಉದ್ದಲಗಕ್ಕೂ ಹರಡಿಕೊಂಡಿದೆ. ಎಲ್ಲಾ ಕಡೆ ಬಸದಿಗಳಿರುವುದೇ ಇದಕ್ಕೆ ಸಾಕ್ಷಿ. ಅಂತಹ ಜೈನ ಧರ್ಮಕ್ಕೆ ಸೇರಿದ ಸಾವಿರಾರು ಇತಿಹಾಸದ ಕುರುಹು ಇರುವ ಬಸದಿಯೊಂದು ಇಲ್ಲಿ ಗಿಡ ಗಂಟಿಗಳ ನಡುವೆ ಪಾಳು ಬಿದ್ದು ಅನಾಥವಾಗಿದೆ.
ಯಾವುದೀ ಬಸದಿ: ಸುಬ್ರಹ್ಮಣ್ಯ ಸಮೀಪದ ಗುತ್ತಿಗಾರಿನ ಕಂದ್ರಪ್ಪಾಡಿ ಎಂಬಲ್ಲಿ ಬಸದಿಯೊಂದಿದೆ. ಈ ಬಸದಿಗೆ 1300 ವರುಷಗಳ ಇತಿಹಾಸವಿದೆ ಎನ್ನಲಾಗುತ್ತಿದೆ. ಬಲ್ಲಾಳರ ಆಳ್ವಿಕೆಯಲ್ಲಿ ಜೈನ ವಂಶಸ್ಥರಿಂದ ಈ ಬಸದಿ ನಿರ್ಮಾಣಗೊಂಡು ಆರಾಧನೆಗೊಳ್ಳುತ್ತಿತ್ತು. ಇಲ್ಲಿ 24 ತೀರ್ಥಂಕರರಲ್ಲಿ ಚಂದ್ರಾವತಿ ಸ್ವಾಮಿ ಮತ್ತು ಪದ್ಮಾವತಿ ದೇವರು ಆರಾಧಿಸಲ್ಪಡುತ್ತಿದ್ದರು ಎಂದು ಹೇಳಲಾಗುತ್ತಿದೆ. ನಂತರದ ದಿನಗಳಲ್ಲಿ ಜೈನ ಸಮುದಾಯಗಳ ಮಧ್ಯೆ ಆಂತರಿಕ ಭಿನ್ನಾಭಿಪ್ರಾಯ ತಲೆದೋರಿ ಬಸದಿ ಅವಸಾನಕ್ಕೆ ತಳ್ಳಲ್ಪಟ್ಟಿತು ಎಂದು ಇಲ್ಲಿನ ಹಿರಿಯರಿಂದ ತಿಳಿದು ಬರುವ ಸಂಗತಿ.
ಈ ಪಾಳು ಬಿದ್ದ ಬಸದಿ ಇದೀಗ ಖಾಸಗಿಯೊಬ್ಬರ ಜಾಗದಲ್ಲಿದ್ದು ಬಸದಿಗೆ ಸಂಬಂಧಿಸಿದ ಹಲವಾರು ಕುರುಹುಗಳು ಇಲ್ಲಿ ಕಂಡುಬರುತ್ತವೆ. ಈ ಸ್ಥಳದಲ್ಲಿ ಕಂಚಿನ ಬೆಳೆಬಾಳುವ ಪ್ರಭಾವಳಿಗಳು ಇತ್ತೆಂದು, ಅದನ್ನು ಮಂಗಳೂರಿನ ವಿ.ವಿ. ಕಾಲೇಜಿನ ಪ್ರಾಚೀನ ವಸ್ತು ಸಂಗ್ರಹಾಲಯದಲ್ಲಿರಿಸಲು ಕೊಂಡೊಯ್ಯಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಇದೀಗ ಈ ಸ್ಥಳದಲ್ಲಿ ಬಸದಿಯ ಅವಶೇಷಗಳು ಕಾಣಸಿಗುತ್ತದೆ.
ಬಸದಿಯ ಮೆಟ್ಟಿಲು, ಗೋಪುರ, ಕಲ್ಲಿನ ಕೆತ್ತನೆಯ ಮೂತರ್ಗಳು, ಆರಾಧನೆಗೆ ಬಳಸುತ್ತಿದ್ದ ಪ್ರಾಚೀನ ಮೂರ್ತಿಗಳು ಹಲವಾರು ಹಳೆಯ ಪರಿಕರಗಳು, ಪೊದೆಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದೆ. ಬಸದಿಗೆ ಸಂಬಂಧಿಸಿ ಸುತ್ತ ಕೋಟೆ, ಕೆರೆ, ಬಾವಿ ಮುಂತಾದ ಕುರುಹುಗಳಿದ್ದೂ ಇದೀಗ ಸಂಪೂರ್ಣ ನಶಿಸಿ ಹೋಗಿದೆ.
ಮರ್ಕಂಜ ಬಸದಿಗೂ ಇಲ್ಲಿಗೂ ನಂಟು: ಕಂದ್ರಪ್ಪಾಡಿಯ ಬಸದಿ ವಿಚಾರ ಸುತ್ತಮುತ್ತಲಿನ ಆರಾಧನಾ ಕೇಂದ್ರಗಳ ವಿಚಾರವಾಗಿ ಇರಿಸಲಾಗುವ ಪ್ರಶ್ನೆಯಲ್ಲಿ ಬಸದಿಗೆ ಸಂಬಂಧಿಸಿದಂತೆ ಹಲವು ಮಹತ್ವದ ಸಂಗತಿಗಳು ಕಂಡು ಬಂದಿದೆ. ಸಮೀಪದಲ್ಲಿ ಕಾರಣಿಕ ದೈವವಾದ ಪುರುಷ ದೈವದ ಆರಾಧನೆಯಾಗುತ್ತಿದ್ದೂ ಬಹಳ ವರುಷಗಳ ಹಿಂದೆ ದೈವದ ಭಂಡಾರ ಬರುತ್ತಿರುವ ಸಂದರ್ಭ, ಜೈನ ಬಸದಿಗೆ ಸಂಬಂಧಿಸಿದವರು ಭಂಡಾರ ಬರುವುದು ನಿಲ್ಲಲಿ, ನಾವು ಊಟ ಸೇವಿಸಿದ ಬಳಿಕ ಮುಂದುವರೆಯಲಿ ಎಂದು ಅಪಹಾಸ್ಯ ಮಾಡಿದುದಕ್ಕೆ ಸಿಟ್ಟುಗೊಂಡ ಪುರುಷ ದೈವ ಶಾಪ ನೀಡಿದ ಪರಿಣಾಮ ಈ ಬಸದಿ ಅವಸಾನ ಆಯಿತು ಎಂಬ ವಾಡಿಕೆ ಕೂಡ ಪ್ರಚಲಿತದಲ್ಲಿದೆ.
ಮರ್ಕಂಜ ಎಂಬಲ್ಲಿ ಮತ್ತು ಕಂದ್ರಪ್ಪಾಡಿ ಈ ಎರಡು ಕಡೆಯಲ್ಲಿ ಬಸದಿ ಇದ್ದು, ಮರ್ಕಂಜ ಬಸದಿ ಜೀರ್ಣೋದ್ಧಾರಗೊಂಡಿದೆ.
ಆದರೆ ಕಂದ್ರಪ್ಪಾಡಿ ಬಸದಿ ಮಾತ್ರ ಪಾಳು ಬಿದ್ದಿದೆ. ಈ ಹಿಂದೆ ಈ ಎರಡೂ ಕಡೆಯ ಬಸದಿಗಳನ್ನು ಸಹೋದರರಿಬ್ಬರೂ ಆರಾಧಿಸುತ್ತಾ ಬರುತ್ತಿದ್ದರೂ ಹಿರಿಯ ಸಹೋದರ ಕಂದ್ರಪ್ಪಾಡಿ ಬಸದಿಯನ್ನೂ, ಕಿರಿಯ ಸಹೋದರ ಮರ್ಕಂಜ ಬಸದಿಯಲ್ಲಿ ಪೂಜಾ ವಿಧಿವಿಧಾನ ನೇರವೇರಿಸುತ್ತಿದ್ದರು ಎಂಬ ಮಾತು ಚಲಾವಣೆಯಲ್ಲಿದೆ.
ಅದರಂತೆ ಹಿರಿಯ ಸೋದರ ಪೂಜಿಸಿದ ಕಂದ್ರಪ್ಪಾಡಿ ಬಸದಿ ಮೊದಲಿಗೆ ಜೀರ್ಣೋದ್ಧಾರ ಆಗಬೇಕಿತ್ತು ಎಂದು ಸ್ಥಳೀಯರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇಲ್ಲಿ ಜೈನ ಸಮುದಾಯವಿಲ್ಲದೆ ಇದು ಅವನತಿ ಹೊಂದಿದ್ದು ಜೈನ ಸಮುದಾಯಕ್ಕೆ ಸಂಬಂಧಿಸಿದ ಪ್ರಮುಖರು ಈ ಬಸದಿ ಜೀರ್ಣೋದ್ಧಾರಕ್ಕೆ ಮನಸ್ಸು ಮಾಡಿ ಮುಂದುವರಿಸಿದಲ್ಲಿ ಸ್ಥಳೀಯರು ಸಹಕಾರ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಕಾಯಕಲ್ಪಕ್ಕೆ ಕಾದಿದೆ: ಮರ್ಕಂಜದಲ್ಲಿ ಅಲ್ಲಿನ ಜೈನ ಬಾಂಧವರು ಸುಸಜ್ಜಿತ ಬಸದಿ ಜೀರ್ಣೋದ್ಧಾರ ಮಾಡಿ ಆರಾಧನೆ ಮಾಡುತ್ತಾ ಪೂಜಾ ಕೈಂಕರ್ಯ ನಡೆಸುತಿದ್ದಾರೆ. ಹೀಗಿರುವಾಗ ಜೈನ ಸಮುದಾಯಕ್ಕೆ ಸಂಬಂಧಿಸಿದವರು ಇಲ್ಲಿಯ ಕಂದರಪ್ಪಾಡಿ ಬಸದಿ ಕಾಯಕಲ್ಪಕ್ಕೆ ಮನಸು ಮಾಡಬೇಕು ಎಂಬುದು ಸ್ಥಳಿಯರ ಇಂಗಿತ.