ಅತ್ತಿಗೆ ಕೊಂದವಗೆ ಜೀವಾವಧಿ ಶಿಕ್ಷೆ
ಮಂಗಳೂರು: ಬೆಳ್ತಂಗಡಿ ಸೋಣಂದೂರು ಮುಂಡೂರಿನಲ್ಲಿ ಅತ್ತಿಗೆಯನ್ನೇ ಕೊಲೆ ಮಾಡಿದ ಮೈದುನ ಸಂತೋಷ್ ಶೆಟ್ಟಿಗೆ ಜಿಲ್ಲಾ 2ನೇ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಇತರ ಆರೋಪಿಗಳಾದ ಕೊಲೆಯಾದವಳ ಪತಿ ವಿಜಯ ಶೆಟ್ಟಿ ಮತ್ತು ಮಾವ ಸುಂದರ ಶೆಟ್ಟಿಯನ್ನು ಕೋರ್ಟ್ ಖುಲಾಸೆ ಗೊಳಿಸಿ ತೀರ್ಪು ನೀಡಿದೆ. ಪೆರಿಯಡ್ಕದ ಶಶಿಕಲಾ (35) ಸೋಣಂದೂರಿನ ವಿಜಯ ಶೆಟ್ಟಿ (47)ಯನ್ನು 12 ವರ್ಷದ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮನೆ ಒಳಗಿನ ವಿಚಾರಗಳನ್ನು ಅಕ್ಕಪಕ್ಕದ ಮನೆಯಲ್ಲಿ ಹೇಳುತ್ತಾಳೆ ಎಂಬ ಕಾರಣಕ್ಕೆ ನಾಲ್ಕು ವರ್ಷಗಳ ಹಿಂದೆ ಪತಿ ಮನೆಯವರು ಕಿರುಕುಳ ನೀಡುತ್ತಿದ್ದರು. 2012ರ ಮೇ 20ರಂದು ಮಟ ಮಟ ಮಧ್ಯಾಹ್ನ ಮೈದುನ ಸಂತೋಷ್ ಶೆಟ್ಟಿ ಕುತ್ತಿಗೆಗೆ ಕೇಬಲ್ ವೈರ್ ಬಿಗಿದು, ಸೋಂಟೆಯಿಂದ ಹೊಡೆದು ಕೊಲೆ ಮಾಡಿರುವುದಾಗಿ ಪೊಲೀಸರು ಆರೋಪ ಪಟ್ಟಿ ದಾಖಲಿಸಿದ್ದರು. ಈ ಬಗ್ಗೆ ಶಶಿಕಲಾ ಸಹೋದರ ರಾಮಣ್ಣ ಶೆಟ್ಟಿ ಪುಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆದು ಸಂತೋಷ್ ಶೆಟ್ಟಿ ತಪ್ಪಿತಸ್ಥ ಎಂದು ಕೋರ್ಟ್ ಮಾ.15ರಂದು ತೀರ್ಪು ನೀಡಿತ್ತು. ಸೋಮವಾರ ನ್ಯಾಯಾಧೀಶ ಬಿ.ಕೆ.ನಾಯ್ಕ್ ಆರೋಪಿ ಸಂತೋಷ್ ಶೆಟ್ಟಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದರು
ಶಾಂತಿಭಂಗ: ಇಬ್ಬರ ಸೆರೆ
ವಿಟ್ಲ: ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ ಇಬ್ಬರು ಸೋಮವಾರ ಅವಾಚ್ಯ ಶಬ್ದಗಳಿಂದ ಬೈದು, ಸಾರ್ವಜನಿಕ ಶಾಂತಿಭಂಗ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಪ್ರಕಾಶ್ ಪಾಟಾಳಿ (28) ಮತ್ತು ಸಮದ್(34) ಬಂಧಿತ ಆರೋಪಿಗಳು.
ಬೈಕ್ ಸ್ಕಿಡ್: ಸವಾರ ಗಾಯ
ವಿಟ್ಲ: ಕೇಪು ಗ್ರಾಮದ ಕುದ್ದುಪದವು ಜಂಕ್ಷನ್ನಲ್ಲಿ ಮುಚ್ಚಿರಪದವು ನಿವಾಸಿ ಸಂಜೀವ (46) ಅವರು ಚಲಾಯಿಸುತ್ತಿದ್ದ ಬೈಕ್ ಭಾನುವಾರ ಸ್ಕಿಡ್ ಆಗಿ ಗಾಯಗೊಂಡಿದ್ದು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಂಚಣಿ ರು. 3 ಸಾವಿರಕ್ಕೆ ಏರಿಸಲು ಆಗ್ರಹ
ಮಂಗಳೂರು: ಕನಿಷ್ಟ ಸಂಬಳದಲ್ಲಿ ದುಡಿಯುವ ಕಾರ್ಮಿಕರಿಗೆ ಕಾರ್ಮಿಕ ಪಿಂಚಣಿ ಯೋಜನೆ ಮಂಜೂರುಗೊಳಿಸಿದ ಪಿಂಚಣಿ ಅತ್ಯಂತ ಕಡಿಮೆಯಾಗಿದ್ದು, ಪರಿಷ್ಕರಿಸಿ ರು. 3 ಸಾವಿರ ಹೆಚ್ಚಿಸುವಂತೆ ಎಐಟಿಯುಸಿ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸಿದೆ. ಈಗಾಗಲೇ ಜಾರಿಯಾಗಿರುವ ಪಿಂಚಣಿಯಲ್ಲಿ ಗೊಂದಲಯುಕ್ತ ಷರತ್ತುಗಳಿದ್ದು, ಪರಿಷ್ತರಿಸುವಂತೆ ಭವಿಷ್ಯನಿಧಿ ಆಯುಕ್ತರ ಮೂಲಕ ದಿಲ್ಲಿ ಆಯುಕ್ತರಿಗೆ ಕಳುಹಿಸಿಕೊಡಲಾಗಿದೆ.