ಅಳಿಕೆ ಕಾನತ್ತಡ್ಕದಲ್ಲಿ ವಿದ್ಯುತ್ ಕಿಡಿ; ಮರ ನಾಶ
ವಿಟ್ಲ: ವಿದ್ಯುತ್ ತಂತಿಗಳ ಕಿಡಿ ಬಿದ್ದು ರಬ್ಬರ್ ಹಾಗೂ ಗಿಡಮರಗಳು ನಾಶವಾಗಿರುವ ಘಟನೆ ಅಳಿಕೆ ಗ್ರಾಮದ ಕಾನತ್ತಡ್ಕ ಎಂಬಲ್ಲಿ ಶನಿವಾರ ನಡೆದಿದೆ. ರೆಂಜಾಡಿ ನೀಲಪ್ಪ ಗೌಡ ಮತ್ತು ಅಬ್ದುಲ್ಲ ಅವರಿಗೆ ಸೇರಿರುವ ಗಿಡಮರಗಳು ಇವಾಗಿವೆ. ಘಟನೆ ಸಂಭವಿಸಿದ್ದು ಮನೆಯವರಿಗೆ ಮಾಹಿತಿ ದೊರೆತ ಕೂಡಲೇ ಸ್ಥಳೀಯರು ಜತೆಗೂಡಿ ಬೆಂಕಿ ಹಬ್ಬದಂತೆ ನೋಡಿಕೊಂಡಿದ್ದು ಪುತ್ತೂರು ಅಗ್ನಿಶಾಮಕ ದಳದವರು ಆಗಮಿಸಿ ಸಂಪೂರ್ಣ ಶಮನಗೊಳಿಸಿದ್ದಾರೆ.
ಭಾನುವಾರ ಮತ್ತೆ ಅದೇ ವಿದ್ಯುತ್ ತಂತಿಗಳಿಂದ ಕಿಡಿ ಬಿದ್ದು ಕಾನತ್ತಡ್ಕ ಬಸ್ ನಿಲ್ದಾಣದ ಬಳಿಯ ಮಾಧವ ಗೌಡ, ಅಣ್ಣು ನಾಯ್ಕ ಹಾಗೂ ಲತೀಫ್ ಅವರ ಗುಡ್ಡದಲ್ಲೂ ಬೆಂಕಿ ಹಬ್ಬಿತ್ತು.
ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಿದ್ದಾರೆ. ಜಾಗದ ಮಾಲಕರು ಸಂಬಂಧಪಟ್ಟ ಇಲಾಖೆಯಲ್ಲಿ ತಂತಿಗಳಿಂದ ಬೆಂಕಿ ಅನಾಹುತ ಸಂಭವಿಸದಂತೆ ಜಾಗರೂಕತೆ ವಹಿಸಲು ವಿನಂತಿಸಿದ್ದು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.