ಆಪ್ಗೆ ಆಪತ್ಕಾಲ: ಅಭ್ಯರ್ಥಿ ಆಯ್ಕೆಗೆ ಅಪಸ್ವರ
ಕರಾವಳಿ ಜನಾಭಿವೃದ್ಧಿ ವೇದಿಕೆ ಬೆಂಬಲ ಆಮ್ ಆದ್ಮಿ ಪಕ್ಷಕ್ಕೆ ಮಾತ್ರ, ಅಭ್ಯರ್ಥಿಗಿಲ್ಲ!
ಟಿ ಜಿತೇಂದ್ರ ಕುಂದೇಶ್ವರ
ಮಂಗಳೂರು: ದಕ್ಷಿಣ ಕನ್ನಡದಲ್ಲಿ ಅಧಿಕೃತ ಮತ್ತು ಅನಧಿಕೃತ ಆಮ್ ಆದ್ಮಿ ಪಕ್ಷದ ಒಳಜಗಳ ಮುಗಿಯಿತು ಎನ್ನುವಷ್ಟರಲ್ಲಿ ಅಭ್ಯರ್ಥಿ ಅಯ್ಕೆ ಕುರಿತು ಅಪಸ್ವರ ಕೇಳಿ ಬಂದಿದೆ. ಪಕ್ಷ ಸಂವಿಧಾನ ರೀತ್ಯಾ ಆಯ್ಕೆ ನಡೆದಿಲ್ಲ ಎಂದು ಪಕ್ಷದ ಒಳಗಿನವರು ವಾದಿಸಿದರೆ, ಆಮ್ ಆದ್ಮಿ ಬೆಂಬಲಕ್ಕೆ ನಿಂತಿದ್ದ ಪ್ರಮುಖ ಸಂಘಟನೆ ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ ತಿರುಗಿ ಬಿದ್ದಿದೆ.
ಜನಸಾಮಾನ್ಯರಿಗೆ ಮಾರಕವಾದ ಕರಾವಳಿಯ ಪೆಟ್ರೋಕೆಮಿಕಲ್ ವಿಶೇಷ ವಿತ್ತ ವಲಯಕ್ಕೆ ಬೆಂಬಲ. ಕಾನೂನು ಬಾಹಿರವಾಗಿ ಮಾನ್ಯತೆ ಪಡೆದುಕೊಂಡ ಶಿಕ್ಷಣ ಸಂಸ್ಥೆಯಲ್ಲಿ ಅಭ್ಯರ್ಥಿ ಕೆಲಸ ಮಾಡುತ್ತಿರುವುದು. ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ದೇಶಕರಾಗಿದ್ದಾಗ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದು, ದಲಿತರ ಸಮಸ್ಯೆಗಳ ನಿರ್ಲಕ್ಷ್ಯ, ಬಿಜೆಪಿ ಪಕ್ಷದ ಸಿದ್ಧಾಂತ ಪರವಾಗಿರುವುದು ಮತ್ತು ಬಿಜೆಪಿ ಟಿಕೆಟ್ ಕೇಳಿಕೊಂಡು ಹೋಗಿರುವುದೇ ಮೊದಲಾದ ಬಂಡವಾಳ ಶಾಹಿ ಪರ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಅವರಿಗೆ ಜನಾಭಿವೃದ್ಧಿ ವೇದಿಕೆ ಬೆಂಬಲ ವಾಪಸ್ ಪಡೆದಿರುವುದಾಗಿ ಹೇಳಿದೆ.
'ವಾಸುದೇವ ಅಭ್ಯರ್ಥಿ ಆಗಿರುವುದು ಮೊದಲೇ ಗೊತ್ತಿತ್ತು. ಆದರೆ ಪೂರ್ವಾಪರ ಮಾಹಿತಿ ಸಿಕ್ಕಿರಲಿಲ್ಲ. ಕ್ರಮೇಣ ಬಂಡವಾಳಶಾಹಿ ಗುಣ ತಿಳಿಯತೊಡಗಿತು. ಈ ಬಗ್ಗೆ ಮಾ.12ರಂದು ವಿಶೇಷ ಸಭೆ ನಡೆಸಿದೆವು. ದೇಶಾದ್ಯಂತ ಆಪ್ ಪಕ್ಷ ಬೆಂಬಲಿಸುವುದು, ಆದರೆ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಬೆಂಬಲಿಸದೆ ಇರಲು ನಿರ್ಧರಿಸಲಾಗಿದೆ ಎಂದು ಸಂಚಾಲಕಿ ವಿದ್ಯಾ ದಿನಕರ್ ತಿಳಿಸಿದ್ದಾರೆ.
'ವಾಸುದೇವ್ ಬಿಜೆಪಿಯಿಂದ ಟಿಕೆಟ್ ಕೇಳಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ಗೆ ಹೋಗಿ ಟಿಕೆಟ್ ಕೇಳುವ ವ್ಯಕ್ತಿ ಆಪ್ಗೆ ಸರಿಹೋಗುವುದಿಲ್ಲ. ಆಪ್ ವಿರೋಧಿಸುವ ಜನ ವಿರೋಧಿ ಕೈಗಾರಿಕೆಗಳಿಗೆ ಅಭ್ಯರ್ಥಿ ಈ ಹಿಂದೆ ಬೆಂಬಲ ನೀಡಿದ್ದಾರೆ. ಜನಸಾಮಾನ್ಯರ ಚಿಂತನೆ, ಆಲೋಚನೆಗಳಿಗೆ ಸೂಕ್ತವಾಗಿರುವ ಅಭ್ಯರ್ಥಿ ಇಲ್ಲಿ ಇಲ್ಲ' ಎಂದು ವಿದ್ಯಾ ದಿನಕರ್ ಸ್ಪಷ್ಟ ಪಡಿಸಿದ್ದಾರೆ.
ಬಿಜೆಪಿ ಟಿಕೆಟ್ ಕೊಡಲು ಬಂದಿದ್ದರು: ಈ ಬಗ್ಗೆ ಆಪ್ ಅಭ್ಯರ್ಥಿ ವಾಸುದೇವ್ ಹೇಳುವುದು ಹೀಗೆ: ಬಿಜೆಪಿಯವರೇ ಟಿಕೆಟ್ ನೀಡುವುದಾಗಿ ಕೇಳಿಕೊಂಡು ಮನೆಗೆ ಬಂದಿದ್ದರು. ನಾನೇ ಆಸಕ್ತಿ ತೋರಿಸಿಲ್ಲ. ಕಾಂಗ್ರೆಸ್ನಲ್ಲಿ ಎನ್ಆರ್ಐ ಫೋರಂ ಅಧ್ಯಕ್ಷರಾಗಿ ಮಾಡುತ್ತೇವೆ, ಪ್ರಚಾರಕ್ಕೆ ಬನ್ನಿ ಎಂದು ಕರೆದಿದ್ದರು. ನಾನು ನಯವಾಗಿ ನಿರಾಕರಿಸಿದ್ದೆ. ನನ್ನಿಂದ ಯಾವ ರೈತರಿಗೆ ಅನ್ಯಾಯ ಆಯಿತು, ಎಂದು ದಾಖಲೆ ಸಹಿತ ತೋರಿಸಿದರೆ ನಾನು ಹೇಳಬಲ್ಲೆ. ವಿಶೇಷ ವಿತ್ತ ವಲಯ ಪರ ನಾನು ಮಾತನಾಡಿಲ್ಲ, ಇದ್ದರೆ ದಾಖಲೆ ನೀಡಲಿ. ರೈತರಿಗೆ ಕೈಲಾಗುವ ಸಹಕಾರ ಮಾಡಿದ್ದೇನೆ. ಆದರೆ ಹೋರಾಟಗಾರರು ಎಂದು ಹೇಳುವ ಇವರು ರೈತರ ದನಿಯಾಗಲೇ ಇಲ್ಲ. ಸುಮ್ಮನೆ ನೋಡುತ್ತಿದ್ದರು.
ಆಪ್ ಜತೆ ಗುರುತಿಸಿಕೊಂಡಿಲ್ಲ: 'ಒಂದು ವರ್ಷದಿಂದ ಕರಾವಳಿ ಜನಜಾಗೃತಿ ವೇದಿಕೆಯವರು ಆಪ್ ಜತೆ ಗುರುತಿಸಿಕೊಂಡಿಲ್ಲ. ತಿಂಗಳ ಹಿಂದೆ ಹತ್ತಿರ ಬಂದರು. ಅವರದೇ ಆಪ್ ಅಭ್ಯರ್ಥಿ ನಿರ್ಣಯ ಮಾಡಿದ್ರು, ಈಗ ಬೆಂಬಲ ಇಲ್ಲ ಎಂದು ಹೇಳುತ್ತಿದ್ದಾರೆ' ಎಂದು ಆಪ್ ಮುಖಂಡ ನಂದಗೋಪಾಲ್ ವಿಶ್ಲೇಷಿಸುತ್ತಾರೆ.
ಆಯ್ಕೆ ಪ್ರಕ್ರಿಯೆಗೆ ಅಪಸ್ವರ: ಕಾರ್ಯಕಾರಿ ಸಮಿತಿ ಸಂಚಾಲಕ ಸ್ಥಾನದಿಂದ ಉಚ್ಚಾಟನೆಗೊಂಡಿದ್ದ ರಾಬರ್ಟ್ ರೋಸಾರಿಯೋ, ಆಪ್ ಪಾರ್ಟಿ ತಮ್ಮದೇ ಎಂದು ವಾದಿಸಿ ಸುದ್ದಿಗೋಷ್ಠಿ ನಡೆಸಿದ್ದರು. ಈಗ ಆಭ್ಯರ್ಥಿ ಆಯ್ಕೆ ಪ್ರಜಾಪ್ರಭುತ್ವ ರೀತಿ ನಡೆದಿಲ್ಲ ಎಂದು ಆರೋಪಿಸಿದ್ದಾರೆ.
'ಭಿನ್ನಾಭಿಪ್ರಾಯ ಶಮನ ಪೂರ್ಣವಾಗಿಲ್ಲ. ನಮ್ಮ ಆಭ್ಯರ್ಥಿ ಆಯ್ಕೆ ಪಕ್ಷ ಸಂವಿಧಾನ ಪ್ರಕಾರ ಆಗಿಲ್ಲ. ಆದರೆ ಆಯ್ಕೆ ನಡೆದು ಹೋಗಿದೆ, ಪ್ರಚಾರಕ್ಕೆ ಭಾಗವಹಿಸಬೇಕಾದ ಅನಿವಾರ್ಯತೆ ಇದೆ. ಚುನಾವಣೆ ಬಳಿಕ ಎಲ್ಲ ವಿಚಾರ ಚರ್ಚೆ ನಡೆಸಲಾಗುವುದು' ಎಂದು ರಾಬಟ್ ರೋಸಾರಿಯೊ ತಿಳಿಸಿದ್ದಾರೆ. 'ಕಾರ್ಯಕಾರಿ ಸಮಿತಿ ಸಂಚಾಲಕ ರಾಬರ್ಟ್ ರೋಸಾರಿಯೊ ಅವರನ್ನು ಸೂಕ್ತ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ತೆಗೆದು ಹಾಕಲಾಗಿತ್ತು. ಪಾರ್ಟಿಯಿಂದ ತೆಗೆಯುವ ಪ್ರಶ್ನೆ ಇಲ್ಲ. ಈಗ ಎಲ್ಲ ಸಮಿತಿಗಳನ್ನು ಬರ್ಖಾಸ್ತು ಮಾಡಿ ವಾಸುದೇವ ನೇತೃತ್ವದಲ್ಲಿ ಚುನಾವಣೆ ಕ್ರಿಯಾ ಸಮಿತಿ ಮಾಡಲಾಗಿದೆ' ಎಂದು ಆಪ್ ಮುಖಂಡ ನಂದಗೋಪಾಲ್ ತಿಳಿಸಿದ್ದಾರೆ.
ಮೇಜು ಕುರ್ಚಿ ಇನ್ನೂ ಬಂದಿಲ್ಲ: ಕಚೇರಿಗೆ ಕುರ್ಚಿ, ಟೇಬಲ್ ದಾನ ನೀಡುವಂತೆ ಪತ್ರಿಕೆಗಳ ಮೂಲಕ ಆಪ್ ಮನವಿ ಮಾಡಿತ್ತು. ಆದರೆ ಯಾವುದೇ ಪೀಠೋಪಕರಣ ಇದುವರೆಗೆ ಬಂದಿಲ್ಲ. 'ದಾನಿಗಳು ಯಾರು ಬಂದಿಲ್ಲ. ನಿಧಾನಕ್ಕೆ ಬರಬಹುದು. ನಾನು ಚುನಾವಣೆ ಪ್ರಚಾರಕ್ಕೆ ಮನೆ ಮನೆಗಳಿಗೆ ಹೋಗುತ್ತಿದ್ದೇನೆ. ಜನ ಪ್ರೀತಿಯಿಂದ ಮಾತನಾಡಿಸಿ, ಪಾನೀಯಗಳನ್ನು ನೀಡುತ್ತಿದ್ದಾರೆ. ತುಂಬಾ ಖುಷಿ ಪಡುತ್ತಿದ್ದಾರೆ' ಎನ್ನುತ್ತಾರೆ ಅಭ್ಯರ್ಥಿ ವಾಸುದೇವ್.