ಮಾಜಿ ಶಾಸಕ ಕುಶಲ ಕಣಕ್ಕೆ
ಸುಳ್ಯ: ದಲಿತರಿಗೆ ನ್ಯಾಯ ಮತ್ತು ಅವರ ಹಕ್ಕುಗಳನ್ನು ದೊರಕಿಸಲು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದಾಗಿ ಸುಳ್ಯ ಮಾಜಿ ಶಾಸಕ ಕೆ.ಕುಶಲ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸುಮಾರು 9.40 ಲಕ್ಷ ಪರಿಶಿಷ್ಟ ಜಾತಿ, ಪಂಗಡದ ದಲಿತ ಮತದಾರರಿದ್ದಾರೆ. ಅನೇಕ ವರ್ಷಗಳಿಂದ ಕರಾವಳಿಯ ಉದ್ದಗಲದಲ್ಲಿರುವ ದಲಿತರಿಗೆ, ಡಾ. ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಕೊಡಮಾಡಿದ ಹಕ್ಕುಗಳು ದೊರೆಯದೆ ಅನ್ಯಾಯವಾಗಿದೆ. ಯಾವುದೇ ಪಕ್ಷದಿಂದ ಆರಿಸಿ ಹೋದವರೂ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಸರ್ಕಾರ ವಿವಿಧ ಇಲಾಖೆಯಲ್ಲಿನ ಪರಿಶಿಷ್ಟರಿಗೆ, ಹಕ್ಕಿನಂತೆ ಸಿಗಬೇಕಾದ ನೀಡಬೇಕಾದ ಬ್ಯಾಕ್ಲಾಗ್ ಹುದ್ದೆ ಭರ್ತಿ ಮಾಡಲು ಮೀನ ಮೇಷ ಎಣಿಸುತ್ತಿದೆ ಎಂದರು.
ದಲಿತರಿಗೆ ಅನ್ಯಾಯ: 2011-12ನೇ ಸಾಲಿಗೆ ಅಂಬೇಡ್ಕರ್ ಯೋಜನೆಯಂತೆ, ದಲಿತರಿಗೆ ಮಂಜೂರಾದ ಕೊಳವೆ ಬಾವಿಯನ್ನು 2014-15ನೇ ಸಾಲಿಗೂ ಕೊರೆಯದೆ ಅನ್ಯಾಯ ಮಾಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 1,60,000 ಎಕ್ರೆ ಜಮೀನು ಡಿ.ಸಿ. ಮನ್ನಾ ಭೂಮಿ ವಂಚಿತಗೊಂಡಿದೆ. ರಾಜ್ಯ ಸರ್ಕಾರದಲ್ಲಿ ಪರಿಶಿಷ್ಟ ಜಾತಿ, ಪಂಗಡದ ನಿಜವಾದ ದಲಿತರಿಗೆ ವಿವಿಧ ಇಲಾಖೆಯಲ್ಲಿ ಸಿಗಬೇಕಾದ ಹುದ್ದೆಯನ್ನು ಪರಿಶಿಷ್ಟರ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಮಾಡಿ, ಬೇರೆ ಮೇಲು ವರ್ಗದ ಜನರು ಉದ್ಯೋಗ ಪಡೆದಿದ್ದಾರೆ. ಇಂತಹ ಸುಮಾರು 40 ಸಾವಿರ ಪ್ರಕರಣಗಳು ಇವೆ ಎಂದು ಹೇಳಿದರು. ದಸಂಸ ಮುಖಂಡರಾದ ವಿಶ್ವನಾಥ ಅಲೆಕ್ಕಾಡಿ, ಆನಂದ ಎನ್. ಇದ್ದರು.