ತೆರಿಗೆ ಹೆಚ್ಚಳ ಭರವಸೆ: ಪೂಜಾರಿ ವಿರುದ್ಧ ದೂರು
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಭರವಸೆ ನೀಡಿರುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಇದರ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಬಿಜೆಪಿ ಜಿಲ್ಲಾ ವಕ್ತಾರ, ವಿಧಾನ ಪರಿಷತ್ತು ಸದಸ್ಯ ಮೋನಪ್ಪ ಭಂಡಾರಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಿಂದಿನ ಪ್ರಣಾಳಿಕೆ ಉಲ್ಲಂಘಿಸಿ ಆಸ್ತಿ ತೆರಿಗೆ ಜಾಸ್ತಿ ಮಾಡುವ ಮೂಲಕ ಜನರಿಗೆ ಮೋಸ ಮಾಡಿದೆ. ಘನತ್ಯಾಜ್ಯ ನಿರ್ವಹಣೆ ವ್ಯವಸ್ಥಿತಗೊಳಿಸದೆ ಏ.1ರಿಂದ ನಾಗರಿಕರಿಂದ ತೆರಿಗೆ ಸಂಗ್ರಹ ವಸೂಲಿಗೆ ನಿರ್ಧಾರ ಮಾಡಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಕಲ್ಲಡ್ಕದಲ್ಲಿ ಮಾ.2ರಂದು ನಡೆದ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಡಾ.ಪ್ರಭಾಕರ ಭಟ್ ವಿರುದ್ಧ 16 ದಿನ ವಿಳಂಬವಾಗಿ ಉದ್ದೇಶಪೂರ್ವಕ ದೂರು ದಾಖಲಿಸಿರುವುದನ್ನು ಖಂಡಿಸುವುದಾಗಿ ಹೇಳಿದರು. ಮುಖಂಡರಾದ ಸುಧೀರ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ಸತೀಶ್ ಪ್ರಭು ಇದ್ದರು.