ಮೋದಿ ಪತ್ನಿ ವಿಚಾರ ಕೇಳಿದ ಪೂಜಾರಿ ವಿರುದ್ಧ ದೂರು
ಮಂಗಳೂರು: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಬಿ. ಜನಾರ್ದನ ಪೂಜಾರಿ ವಿರುದ್ಧ ನೀತಿ ಸಂಹಿತೆ ದೂರು ದಾಖಲಾಗಿದೆ. ಮೂಡುಬಿದರೆಯಲ್ಲಿ ಭಾನುವಾರ ಕಾಂಗ್ರೆಸ್ ಪಾದಯಾತ್ರೆ ವೇಳೆ ಜನಾರ್ದನ ಪೂಜಾರಿ ಭಾಷಣದಲ್ಲಿ ತನ್ನ ವೈವಾಹಿಕ ಜೀವನದಲ್ಲಿ ವಿಫಲರಾಗಿರುವ ನರೇಂದ್ರ ಮೋದಿ ಕೈಯಲ್ಲಿ ದೇಶವನ್ನು ನೀಡುತ್ತೀರಾ ಎಂದು ಟೀಕಿಸಿದ್ದರು. ಈ ಭಾಷಣವನ್ನು ಸೆಕ್ಟರ್ ಅಧಿಕಾರಿಗಳು ವೀಡಿಯೋ ಚಿತ್ರೀಕರಿಸಿದ್ದರು. ಇದನ್ನು ವೀಕ್ಷಿಸಿದ ಸಹಾಯಕ ಚುನಾವಣೆ ಅಧಿಕಾರಿ ಡಾ.ಅಶೋಕ್ ಸ್ವಯಂ ಪ್ರೇರಿತವಾಗಿ ಚುನಾವಣೆ ನೀತಿ ಸಂಹಿತೆ ದೂರು ದಾಖಲಿಸಿದ್ದಾರೆ.
ಇದೇ ರೀತಿ ಪಾದಯಾತ್ರೆ ಭಾಷಣದಲ್ಲಿ 'ಮೋದಿಯ ತಂದೆ ಯಾರು ಎನ್ನುವುದನ್ನು ಆರ್ಎಸ್ಎಸ್ ಬಹಿರಂಗಪಡಿಸಬೇಕು' ಎಂದು ಹೇಳಿದ ನವಿಮುಂಬಯಿ ಕಾರ್ಪೊರೇಟರ್ ಸಂತೋಷ್ ಶೆಟ್ಟಿ ವಿರುದ್ಧವೂ ಚುನಾವಣೆ ನೀತಿ ಸಂಹಿತೆ ದೂರು ದಾಖಲಾಗಿದೆ.