ಸರ್ಕಾರ ಬದಲಾಗದಿದ್ದರೆ ಗಂಡಾಂತರ
ಉಪ್ಪಿನಂಗಡಿ: ದೇಶದಲ್ಲಿ ಸರ್ಕಾರದ ಬದಲಾವಣೆ ಅಗತ್ಯವಾಗಿದ್ದು, ಬದಲಾವಣೆ ಆಗದಿದ್ದರೆ ಈ ದೇಶಕ್ಕೆ ಗಂಡಾಂತರ ಕಾದಿದೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಕಡಬ ಅನುಗ್ರಹ ಸಭಾಭವನದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ 10 ವರ್ಷಗಳಿಂದ ದೇಶ ತಲೆ ತಗ್ಗಿಸುವಂತಾಗಿದೆ. ಹೊರದೇಶದವರು ನಮ್ಮ ಸೈನಿಕರ ತಲೆ ಕತ್ತರಿಸಿಕೊಂಡು ಹೋದರೂ ರಕ್ಷಣಾ ಮಂತ್ರಿ ಮಾತ್ರ ಚಕಾರವೆತ್ತಲಿಲ್ಲ. ದೇಶದಲ್ಲಿ ಭ್ರಷ್ಟಾಚಾರ, ಬೆಲೆ ಏರಿಕೆಯಿಂದ ಜನತೆ ತತ್ತರಿಸುವಂತಾಗಿದೆ. ಈ ನಿಟ್ಟಿನಲ್ಲಿ ದೇಶಕ್ಕೆ ದಕ್ಷ ನಾಯಕ ನರೇಂದ್ರ ಮೋದಿ ಅವರ ಅಗತ್ಯವಿದ್ದು, ಅವರನ್ನು ಮುಂದಿನ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಸುರೇಶ್ ಕುಮಾರ್ ಕರೆ ನೀಡಿದರು.
ನಳಿನ್ ವಿರುದ್ಧ ಮೊದಲು ಗೆಲ್ಲಲಿ: 1991ರಿಂದ ಗೆಲ್ಲಲಾಗದ ಜನಾರ್ದನ ಪೂಜಾರಿ 'ನರೇಂದ್ರ ಮೋದಿ ನನ್ನ ವಿರುದ್ಧ ಚುನಾವಣೆಗೆ ನಿಂತರೂ ನಾನು ಗೆಲ್ಲುತ್ತೇನೆ' ಎಂದು ಹೇಳುತ್ತಾರೆ.
ಆದರೆ ಅವರು ಮೊದಲು ನಳಿನ್ ಕುಮಾರ್ ವಿರುದ್ಧ ಗೆದ್ದು ತೋರಿಸಲಿ ಎಂದು ಸುರೇಶ್ ಕುಮಾರ್‌ಸವಾಲು ಹಾಕಿದರು.
ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಸುಳ್ಯ ಶಾಸಕ ಎಸ್. ಅಂಗಾರ, ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ಮಾಜಿ ಸಂಸದೆ ತೇಜಶ್ವಿನಿ ರಮೇಶ್, ಮಾತನಾಡಿದರು.