ಹದಗೆಟ್ಟ ರಸ್ತೆ: ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ ಎಚ್ಚರಿಕೆ
ಬಂಟ್ವಾಳ: ಜನಪ್ರತಿನಿಧಿಗಳ 'ಗಡಿ-ಬಿಡಿ'ಗೆ ಇದೊಂದು ಜ್ವಲಂತ ಉದಾಹರಣೆ. 'ಕರ್ನಾಟಕ- ಕೇರಳ ಗಡಿ ಪ್ರದೇಶ ಕರೋಪಾಡಿಯ ಆನೆಕಲ್ಲು- ಕೆಮ್ಮಾಜೆ ರಸ್ತೆ ಶೋಚನೀಯ ಪರಿಸ್ಥಿತಿ ತಲುಪಿದೆ, ನಮ್ಮ ಜನಪ್ರತಿನಿಧಿಗಳಿಗೆ ನಿದ್ದೆ ಬಿಟ್ಟಿಲ್ಲ, ಹಾಗಾಗಿ ನಾವು ಚುನಾವಣೆ ಬಹಿಷ್ಕರಿಸುತ್ತೇವೆ' ಎನ್ನುತ್ತಿದ್ದಾರೆ ಕರೋಪಾಡಿ ಗ್ರಾಮಸ್ಥರು.
ಕೇರಳ ಮತ್ತು ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿರುವ ಈ ಆನೆಕಲ್ಲು- ಕೆಮ್ಮಾಜೆ ರಸ್ತೆ 2002ರಲ್ಲಿ ಒಮ್ಮೆ ಡಾಂಬರಿಕರಣಗೊಂಡದ್ದು ಬಿಟ್ಟರೆ, ನಂತರದ ದಿನಗಳಲ್ಲಿ ಮರುಡಾಂಬರಿಕರಣವಾಗಲೀ, ತೇಪೆ ಹಚ್ಚುವ ಕಾಮಗಾರಿಯಾಗಲೀ ನಡೆದಿಲ್ಲ. ಕಳೆದ ಐದು ವರ್ಷಗಳಿಂದ ಈ ರಸ್ತೆಯ ಸ್ಥಿತಿ ತೀರ ಹದಗೆಟ್ಟಿದ್ದು, ಆಡಳಿತ ವ್ಯವಸ್ಥೆಯ ಜಾಣ ಕುರುಡು ಇಲ್ಲಿನ ಗ್ರಾಮಸ್ಥರ ಸಂಕಟ ಹೆಚ್ಚಿಸಿದೆ. ರಸ್ತೆಯ ನಾದುರಸ್ತಿ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದೂ ಕೂಡ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ವಾಹನ ಸಂಚಾರ ಬಲುಕಷ್ಟ: ಈ ರಸ್ತೆಯಲ್ಲಿ 4 ಬಸ್‌ಗಳು ಸಂಚರಿಸುತ್ತಿದ್ದು, ಸಂಚಾರ ಕಷ್ಟವಾಗುತ್ತಿದೆ. ನಿತ್ಯ ಧೂಳು ಹಾರಾಡುತ್ತಿದ್ದು, ಮಳೆಗಾಲದಲ್ಲಂತೂ ಇದೇ ಪರಿಸ್ಥಿತಿ ಮುಂದುವರಿದರೆ ರಸ್ತೆಯಲ್ಲಿ ಸಂಚಾರ ಸಾಧ್ಯವಿಲ್ಲ. ರಸ್ತೆಯ ಡಾಂಬರು ಕಿತ್ತುಹೋಗಿ 6 ವರ್ಷಗಳೇ ಕಳೆದಿವೆ. ಜನಪ್ರತಿನಿಧಿಗಳು ಕೇವಲ ಭರವಸೆಯನ್ನಷ್ಟೇ ನೀಡಿದಲ್ಲದೆ, ಇನ್ನೂ ಕಾಮಗಾರಿಯಾಗಿಲ್ಲ. ಇದೀಗ ಚುನಾವಣೆ ನೀತಿ ಸಂಹಿತೆ ನೆಪ ಹೇಳುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.
ಚುನಾವಣೆಗೆ ಬಹಿಷ್ಕಾರ: ಗ್ರಾಮಸ್ಥರ ಬೇಡಿಕೆ ಈಡೇರಿಸದ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಧೋರಣೆ ಖಂಡಿಸಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ನಡೆಸಲು ತೀರ್ಮಾನಿಸಿದ್ದಾರೆ. ಗ್ರಾ.ಪಂ. ಅಧ್ಯಕ್ಷರ ಪಕ್ಷ ರಾಜಕೀಯದಿಂದಾಗಿ ಗ್ರಾಮಸ್ಥರ ಬೇಡಿಕೆ ಈಡೇರುತ್ತಿಲ್ಲ ಎಂದು ಆರೋಪಿಸುವ ಗ್ರಾಮಸ್ಥರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸುವ ಮೂಲಕ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸುವುದಾಗಿ ತಿಳಿಸಿದ್ದಾರೆ.
ರಸ್ತೆ ಹಾಳಾಗಿ 6 ವರ್ಷಗಳೇ ಕಳೆದರೂ ಇನ್ನೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಜನಪ್ರತಿನಿಧಿಗಳು ಕೇವಲ ಮೌಖಿಕ ಭರವಸೆಯನ್ನಷ್ಟೇ ನೀಡಿದ್ದಲ್ಲದೆ, ಸುಳ್ಳು ಆಶ್ವಾಸನೆ ನೀಡಿ ಜನರನ್ನು ಮೂರ್ಖರನ್ನಾಗಿಸುತ್ತಾ ಬಂದಿದ್ದಾರೆ. ಇದೀಗ ರಸ್ತೆಯ ದುರವಸ್ಥೆ ನೋಡಿ ನಮ್ಮ ಸಹನೆಯ ಕಟ್ಟೆಯೊಡೆದಿದೆ. ಈ ನಿಟ್ಟಿನಲ್ಲಿ ನಮಗಿರುವುದು ಒಂದೇ ದಾರಿ ಚುನಾವಣೆ ಬಹಿಷ್ಕಾರ.