ಕೆಬಿಎಲ್ ಲಕ್ಷ ಕೋಟಿ ರು. ವ್ಯವಹಾರ ಗುರಿ: ಜಯರಾಮ ಭಟ್
ಉಡುಪಿ: ದೇಶದ ಖಾಸಗಿ ಬ್ಯಾಂಕ್ಗಳಲ್ಲಿ ಮುಂಚೂಣಿಯಲ್ಲಿರುವ ಕರ್ಣಾಟಕ ಬ್ಯಾಂಕ್ ಪ್ರಸ್ತುತ ರು. 67 ಸಾವಿರ ಕೋಟಿ ವ್ಯವಹಾರ ನಡೆಸುತ್ತಿದ್ದು ರು. 37 ಸಾವಿರ ಕೋಟಿ ಠೇವಣಿ ಮತ್ತು ರು. 27 ಸಾವಿರ ಕೋಟಿ ಮುಂಗಡವನ್ನು ಹೊಂದಿದೆ. ಮುಂದಿನ ಎರಡು ವರ್ಷಗಳಲ್ಲಿ ಒಂದು ಲಕ್ಷ ಕೋಟಿ ವ್ಯವಹಾರ ನಡೆಸುವ ಗುರಿಯೊಂದಿಗೆ ಮುನ್ನಡೆಯುತ್ತಿದೆ ಎಂದು ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ ಭಟ್ ಹೇಳಿದ್ದಾರೆ.
ಗುರುವಾರ ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆ ಸಮೀಪದಲ್ಲಿರುವ ಕಟ್ಟಡದಲ್ಲಿ ಕರ್ಣಾಟಕ ಬ್ಯಾಂಕ್ನ 659ನೇ ಎಟಿಎಂ ಮನಿಪ್ಲಾಂಟ್ ಉದ್ಘಾಟಿಸಿ ಅವರು ಮಾತನಾಡಿದರು.
ಈ ವರ್ಷದ ಮಾರ್ಚ್ ಅಂತ್ಯದೊಳಗೆ ಒಟ್ಟು 700 ಎಟಿಎಂ ಹಾಗೂ 600 ಶಾಖೆಗಳನ್ನು ಆರಂಭಿಸುವ ಗುರಿ ಇಟ್ಟುಕೊಳ್ಳಲಾಗಿದ್ದು, ಈಗಾಗಲೇ 570 ಶಾಖೆಗಳು ಕಾರ್ಯಾಚರಿಸುತ್ತಿವೆ ಎಂದರು.
ಸಹಾಯಕ ಮಹಾಪ್ರಬಂಧಕ ಎಚ್.ಪಿ. ರವೀಂದ್ರನಾಥನ್, ಮುಖ್ಯ ವ್ಯವಸ್ಥಾಪಕ ಜಿ.ಎಂ. ನಾಗೇಶ ರಾವ್, ಕುಂದಾಪುರ ಶಾಖೆಯ ಹಿರಿಯ ಪ್ರಬಂಧಕ ಚಂದ್ರಶೇಖರ ನಾವಡ, ಉದ್ಯಮಿ ಉಮೇಶ ಮೇಸ್ತ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ವ್ಯಂಗ್ಯಚಿತ್ರಕಾರ ಜಿ.ಬಿ. ಕಲೈಕಾರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿ. ರಾಘವೇಂದ್ರ ಪೈ, ಕೊಂಕಣ ಖಾರ್ವಿ ಸಮಾಜದ ಅಧ್ಯಕ್ಷ ವೈ. ಸುರೇಶ ಖಾರ್ವಿ, ಉಪಾಧ್ಯಕ್ಷ ಲಕ್ಷ್ಮಣ ಖಾರ್ವಿ, ಮಂತಿ ಸುರೇಶ ಖಾರ್ವಿ, ರಾಮದಾಸ ಪಟೇಲ್, ಜನಾರ್ದನ ಖಾರ್ವಿ, ಮಡಿ ಅನಂತ ಖಾರ್ವಿ, ಬಿ. ಸತೀಶ ಖಾರ್ವಿ, ನಾರಾಯಣ ಶ್ಯಾನುಭಾಗ್, ಅಶೋಕ ಕೊಡಂಚ ಇದ್ದರು.