ಚುನಾವಣೆ ಬಾಡಿಗೆ ನೆಪದಲ್ಲಿ ಕಾರು ಮಾಲೀಕರಿಗೆ ಕಿರುಕುಳ ಆರೋಪ
ಬಂಟ್ವಾಳ: ಲೋಕಸಭಾ ಚುನಾವಣೆ ಕರ್ತವ್ಯಕ್ಕೆ ಸಂಬಂಧಿಸಿದಂತೆ ನಿಯೋಜನೆಗೊಂಡ ಅಧಿಕಾರಿಗಳಿಗೆ ತಿರುಗಾಡಲು ಇಲ್ಲಿನ ಟೂರಿಸ್ಟ್ ಕಾರುಗಳನ್ನು ಬಾಡಿಗೆಗೆ ಪಡೆಯುವ ನೆಪದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿಂದಿನ ಚುನಾವಣಾ ಕರ್ತವ್ಯಕ್ಕೆಂದು ಬಾಡಿಗೆಗೆ ಪಡೆದುಕೊಂಡ ಕಾರುಗಳಿಗೆ ಮತ್ತೆ ಬಾಡಿಗೆ ನೀಡಲು ಸತಾಯಿಸಿದ್ದಲ್ಲದೆ ಕಡಿಮೆ ಮೊತ್ತದ ಬಾಡಿಗೆ ನೀಡುತ್ತಿರುವ ಬಗ್ಗೆ ಟೂರಿಸ್ಟ್ ಕಾರು ಮಾಲೀಕ ಚಾಲಕರ ಸಂಘ ಆಕ್ರೋಶ ವ್ಯಕ್ತಪಡಿಸಿತ್ತು. ಇದೀಗ ಬಾಡಿಗೆಗೆ ಬರಲು ಒಪ್ಪದಿರುವ ಸುಮಾರು 50ಕ್ಕೂ ಮಿಕ್ಕಿ ಟೂರಿಸ್ಟ್ ಕಾರುಗಳ ದಾಖಲೆಪತ್ರಗಳನ್ನು ಸಾರಿಗೆ ಅಧಿಕಾರಿಗಳು ಏಕಾಏಕಿ ಕೊಂಡೊಯ್ಯುತ್ತಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಚುನಾವಣೆ ನೆಪದಲ್ಲಿ ಅಧಿಕಾರಿಗಳು ಕಡಿಮೆ ಮೊತ್ತದ ಬಾಡಿಗೆ ನೀಡುವುದು ಮತ್ತು ದಾಖಲೆಪತ್ರ ಕೊಂಡೊಯ್ಯುವ ಮೂಲಕ ಅನಗತ್ಯ ಕಿರುಕುಳ ನೀಡಬಾರದು ಎಂದು ತಾಲೂಕಿನ ಟೂರಿಸ್ಟ್ ಕಾರು ಚಾಲಕ-ಮಾಲೀಕರ ಸಂಘದ ಅಧ್ಯಕ್ಷ ಕೂಸಪ್ಪ ಪ್ರಕಟಣೆ ತಿಳಿಸಿದೆ.