ನರೇಂದ್ರ ಮೋದಿ ಎಲ್ಲ ಜನಾಂಗದ ನಾಯಕ: ರುಕ್ಮಯ ಪೂಜಾರಿ
ಮಂಗಳೂರು: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ಎಲ್ಲ ಜಾತಿ, ಜನಾಂಗದವರು ತಮ್ಮ ನಾಯಕ ಎಂದು ಒಪ್ಪಿದ್ದಾರೆ. ಮೋದಿ ಪ್ರಧಾನಿ ಯಾದರೆ ಗುಜರಾತ್ ಮಾದರಿ ಅಭಿವೃದ್ಧಿ ದೇಶವ್ಯಾಪಿ ಆಗುತ್ತದೆ ಎಂದು ಚುನಾವಣೆ ಸಮಿತಿ ಅಧ್ಯಕ್ಷ ರುಕ್ಮಯ ಪೂಜಾರಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು. ಸಂಸದ ನಳಿನ್ ಕುಮಾರ್ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಸಾಧಿಸಿ ತೋರಿಸಿದ್ದಾರೆ. ಅವರನ್ನು ಆಯ್ಕೆ ಮಾಡುವಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯರಾ ಗಣೇಶ್ ಕಾರ್ಣಿಕ್, ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ಮೋನಪ್ಪ ಭಂಡಾರಿ, ಶ್ರೀಕರ ಪ್ರಭು ಇದ್ದರು.
ಬಿಜೆಪಿ ಪ್ರಮುಖರಿಂದ ನೇರ ಸಂಪರ್ಕ
ತಾಲೂಕಿನ ನಾಲ್ಕು ಕ್ಷೇತ್ರದಲ್ಲಿ 1 ಲಕ್ಷಕ್ಕೂ ಮಿಕ್ಕಿ ಮತದಾರರನ್ನು ಬಿಜೆಪಿ ಪ್ರಮುಖರು ವೈಯಕ್ತಿಕವಾಗಿ ಭೇಟಿಯಾಗಿ ಪ್ರಚಾರ ಮಾಡಲಿದ್ದಾರೆ ಎಂದು ಮಾಜಿ ಶಾಕರ ರುಕ್ಮಯ ಪೂಜಾರಿ ಕರೆ ನೀಡಿದರು.
ಬಿಜೆಪಿ ಕಚೇರಿಯಲ್ಲಿ ಗುರುವಾರ ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮಂಗಳೂರು ಮತ್ತು ಮೂಡುಬಿದರೆ ಕ್ಷೇತ್ರಗಳ ಪ್ರಮುಖರು ಸಭೆಯಲ್ಲಿ ಅವರು ಮಾತನಾಡಿದರು.
ಧಾರ್ಮಿಕ ಮುಖಂಡರು, ಅಸಂಘಟಿತ ಕಾರ್ಮಿಕರು, ಚಹಾ ಮಾರುವವರು, ಡಾಕ್ಟರ್, ಎಂಜಿನಿಯರ್, ವಕೀಲರು, ವಿದ್ಯಾರ್ಥಿಗಳು, ಹೊಸ ಮತದಾರರು, ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳು, ನಿವೃತ್ತ ಸರ್ಕಾರಿ ನೌಕರರು, ನಿವೃತ್ತ ಸೈನಿಕರ ಸಭೆ ನಡೆಸಿ ಬಿಜೆಪಿ ಬೆಂಬಲ ಕೋರುವುದು, ಮೋದಿ ಪ್ರಧಾನಿ ಮಂತ್ರಿ ಮಾಡುವ ಅಗತ್ಯತೆ ಮನದಟ್ಟು ಮಾಡಬೇಕು ಎಂದರು.