ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಳಿನ್‌ಗಿಂತ ಪತ್ನಿ ಸಿರಿದೇವಿ!

Rashmi Kasaragodu
Updated On : 21 Mar 2014, 12:57 pm

ಮಂಗಳೂರು: ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್‌ಗಿಂತ ಅವರ ಪತ್ನಿ ಶ್ರೀದೇವಿ ಎನ್.ಶೆಟ್ಟಿ ಆದಾಯ ಹಾಗೂ ಆಸ್ತಿಯಲ್ಲಿ ಸಿರಿವಂತರು.
 ಲೋಕಸಭೆಗೆ ಸ್ಪರ್ಧಿಸುತ್ತಿರುವ ನಳಿನ್ ಕುಮಾರ್ ಕಟೀಲ್ ಗುರುವಾರ ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿದವಿತ್‌ನಲ್ಲಿ ಈ ಬಗ್ಗೆ ವಿವರ ನೀಡಿದ್ದಾರೆ. ಶ್ರೀದೇವಿಗೆ ರು. 6.36 ಲಕ್ಷ ಆದಾಯ, ನಳಿನ್‌ಗೆ ರು. 3.90 ಲಕ್ಷ ಎಂದು ದಾಖಲಿಸಿದ್ದಾರೆ. ನಳಿನ್ ಬಳಿ ಚರ ಸೊತ್ತು ರು. 5.37 ಲಕ್ಷ, , ಪತ್ನಿ ಬಳಿ 8 ಪಟ್ಟು ಅಧಿಕ ಎಂದರೆ ರು. 45.69 ಲಕ್ಷ.
 ಮಕ್ಕಳಿಬ್ಬರ ಹೆಸರಲ್ಲಿ ತಲಾ ರು. 61,111 ನಗದು. ನಳಿನ್ ರು. 5.89 ಲಕ್ಷ ಮೌಲ್ಯದ ಆಸ್ತಿ ಹೊಂದಿದ್ದಾರೆ. ಪತ್ನಿ ಹೆಸರಿನಲ್ಲಿ ರು. 14.93 ಲಕ್ಷ ಬ್ಯಾಂಕ್ ಸಾಲವಿದೆ. ನಳಿನ್ ಬಳಿ ರು. 30 ಸಾವಿರ ನಗದು, ಪತ್ನಿ ಬಳಿ ರು. 15 ಸಾವಿರ ನಗದು ಇದೆ. ವಿವಿಧ ಬ್ಯಾಂಕ್‌ಗಳಲ್ಲಿ ನಳಿನ್ ರು. 3.20 ಲಕ್ಷ ಠೇವಣಿ ಹೊಂದಿದ್ದರೆ, ಪತ್ನಿ ಬಳಿ  ರು. 5,111 ಠೇವಣಿ ಮೊತ್ತ ಇದೆ. ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ನಳಿನ್ ರು. 5 ಸಾವಿರ ಶೇರು ಹೊಂದಿದ್ದು, ಬಿರ್ಲಾ ಸನ್ ಲೈಫ್ ಇನ್ಸೂರೆನ್ಸ್ ನಲ್ಲಿ ರು. 45 ಸಾವಿರ ಮೌಲ್ಯದ ಇನ್ಸೂರೆನ್ಸ್ ಹೊಂದಿದ್ದಾರೆ.
ಸ್ವಂತ ವಾಹನ ಇಲ್ಲ: ನಳಿನ್ ಹೆಸರಿನಲ್ಲಿ ಯಾವುದೇ ವಾಹನ ಇಲ್ಲ. ಆದರೆ ಪತ್ನಿ ಹೆಸರಲ್ಲಿ ರು. 1.20 ಲಕ್ಷ ಮೌಲ್ಯದ ಮಾರುತಿ ಆಲ್ಟೋ ಕಾರು ಮತ್ತು ರು. 16.70 ಲಕ್ಷ ಮೌಲ್ಯದ ದೂಸಾನ್ ಹೈಡ್ರೋಲಿಕ್ ಎಕ್ಸವೇಟರ್ ವಾಹನ ಇದೆ. ನಳಿನ್‌ರಲ್ಲಿ ರು. 56 ಸಾವಿರ ಮೌಲ್ಯದ ಚಿನ್ನ ಹಾಗೂ ರು. 36 ಸಾವಿರ ಮೌಲ್ಯದ ಬೆಳ್ಳಿ ಆಭರಣ ಇದೆ. ಆದರೆ ಪತ್ನಿಯಲ್ಲಿ ಚಿನ್ನಾಭರಣ, ಎಲೆಕ್ಟ್ರಾನಿಕ್ ಸಾಮಗ್ರಿ ಸೇರಿದಂತೆ ಒಟ್ಟು ರು. 28.22 ಲಕ್ಷದ ಸೊತ್ತುಗಳಿವೆ.
ಪುತ್ತೂರು ಕಡಬದ ಪಾಲ್ತಾಡಿಯಲ್ಲಿ ಸಹೋದರರ ಹಕ್ಕಿನಲ್ಲಿ ನಳಿನ್‌ಗೆ 8.19 ಎಕರೆ ಜಾಗ ಇದೆ.   ಪತ್ನಿಗೆ ಅಶೋಕ ನಗರದಲ್ಲಿ ರು. 5.89 ಲಕ್ಷ ಮೌಲ್ಯದ ಅಶೋಕ ಅಪಾರ್ಟ್‌ಮೆಂಟ್ ಇದೆ. ಇದರ ಅಭಿವೃದ್ಧಿಗೆ ರು. 15 ಲಕ್ಷ ಹೂಡಿಕೆ ಮಾಡಿದ್ದಾರೆ.
 ನಳಿನ್ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಒಂದು ಖಾಸಗಿ ಪ್ರಕರಣ ಇದೆ. ಸೆಕ್ಷನ್ 120(ಬಿ), 153, 153 ಎ, 153ಬಿ, 501, 504, 506 11 ಮತ್ತು 34ರನ್ವಯ ಪ್ರಕರಣ ದಾಖಲಾಗಿದೆ. 1983ರಲ್ಲಿ ಪುತ್ತೂರು ಫಿಲೋಮಿನಾ ಹೈಸ್ಕೂಲ್‌ನಲ್ಲಿ ನಳಿನ್ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದ್ದಾರೆ. ಪ್ರಸ್ತುತ ಅಶೋಕ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದಾರೆ ಎಂದು ಅಫಿದವಿತ್‌ನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement