ರಾತ್ರಿ ವಾಹನ ಓವರ್‌ಟೇಕ್ ನಿಯಮ: ಕೇಂದ್ರ ಸರ್ಕಾರ ಮೌನ
ಮಂಗಳೂರು: ರಾತ್ರಿ ಸಂಚಾರ ವೇಳೆ ವಾಹನ ಓವರ್‌ಟೇಕ್ ಮಾಡುವುದು ಹೇಗೆ? ವಾಹನದ ಆಯಸ್ಸು ನಿರ್ಧಾರಕ್ಕೆ ನಿರ್ದಿಷ್ಟ ಮಾನದಂಡ ಯಾವುದು? ದೇಶದಲ್ಲಿ ವಾಹನಗಳಿಗೆ ಏಕರೂಪದ ತೆರಿಗೆ ಏಕಿಲ್ಲ?
ಈ ಪ್ರಶ್ನೆಗಳಿಗೆ ಇದುವರೆಗೆ ಸರಿಯಾದ ಉತ್ತರ ಸಿಕ್ಕಿಲ್ಲ. ಉತ್ತರಿಸಬೇಕಾದ ಕೇಂದ್ರ ಸರ್ಕಾರ ಮೌನವಾಗಿದೆ.
ಮಂಗಳೂರಿನ ಆರ್‌ಟಿಒ ಕಚೇರಿಯಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಂಗಳೂರು ವಕೀಲರ ಸಂಘದ ಆಶ್ರಯದಲ್ಲಿ ನಡೆದ 'ಮೋಟಾರು ವಾಹನ ಕಾಯ್ದೆ' ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಜಿಜ್ಞಾಸೆಗೆ ಕಾರಣವಾದ ಅಂಶ.
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್. ಹೆಗಡೆ ಉಪಯುಕ್ತ ಮಾಹಿತಿ ನೀಡಿದರು.
ರಾತ್ರಿ ವೇಳೆ ವಾಹನ ಚಲಾಯಿಸುವಾಗ ಓವರ್ ಟೇಕ್ ಹೇಗೆ ಮಾಡಬೇಕು ಎಂಬುದಕ್ಕೆ ನಿರ್ದಿಷ್ಟ ನಿಯಮವಿಲ್ಲ. ಡಿಂ ಡಿಪ್ ಮಾಡುವುದು, ಸಿಗ್ನಲ್ ನೀಡಿ ಓವರ್‌ಟೇಕ್ ಮಾಡುವುದು ಸರಿಯಾದ ಕ್ರಮವಲ್ಲ. ಅದೇ ರೀತಿ ಒಂದು ವಾಹನಕ್ಕೆ ನಿರ್ದಿಷ್ಟವಾಗಿ ಎಷ್ಟು ವಯಸ್ಸು ಎಂದು ನಿರ್ಧಾರವಾಗಿಲ್ಲ. ಖಂಡಂ ಆದ ವಾಹನವನ್ನಷ್ಟೇ ಆರ್‌ಟಿಒ ಚಾಲನೆಗೆ ಸಾಧ್ಯವಿಲ್ಲ ಎಂದು ದೃಢೀಕರಿಸುತ್ತದೆ. ವಾಹನಗಳಿಗೆ ತೆರಿಗೆ ವಿಧಿಸುವಲ್ಲೂ ಏಕರೂಪ ಇಲ್ಲ. ಇದರಿಂದ ಬೇರೆ ರಾಜ್ಯದಲ್ಲಿ ಕಡಿಮೆ ತೆರಿಗೆ ಇದ್ದರೆ ನಮ್ಮ ರಾಜ್ಯದಲ್ಲಿ ಜಾಸ್ತಿ ಇರುತ್ತದೆ. ಹಾಗಾಗಿ ಕಡಿಮೆ ತೆರಿಗೆ ಇರುವಲ್ಲಿ ವಾಹನ ನೋಂದಣಿ ಮಾಡಿ ಇನ್ನೊಂದು ರಾಜ್ಯದಲ್ಲಿ ಸಂಚಾರಕ್ಕೆ ಬಳಸುತ್ತಾರೆ. ಈ ಬಗ್ಗೂ ನಿರ್ದಿಷ್ಟ ನಿಯಮ ರೂಪುಗೊಳ್ಳಬೇಕು ಎಂದು ಆಶಿಸಿದರು.
ಹಿರಿಯ ನಾಗರಿಕರಿಗೆ ಆಹ್ವಾನ: ಚಾಲನಾ ಪರವಾನಗಿ ಪಡೆಯಲು ಕನಿಷ್ಠ 18 ವರ್ಷ, ಗರಿಷ್ಠ ಎಷ್ಟು ವರ್ಷ ಎಂದು ನಿಗದಿಯಾಗಿಲ್ಲ. ಆರ್‌ಟಿಒ ಕಚೇರಿಗೆ ಮೊನ್ನೆ 92 ವರ್ಷದವರು ಬಂದಿದ್ದರು. ವೈದ್ಯಕೀಯ ದೃಢಪತ್ರ ತಂದಿದ್ದರು. ಹಾಗಾಗಿ ಪರವಾನಗಿ ನವೀಕರಿಸಲಾಗಿದೆ. ಅವರಿಗಿಂತ ಹಿರಿಯ ನಾಗರಿಕರೂ ಆದಷ್ಟು ಸಂಖ್ಯೆಯಲ್ಲಿ ಆರ್‌ಟಿಒ ಕಚೇರಿಗೆ ಆಗಮಿಸಬೇಕು ಎಂಬುದು ನಮ್ಮ ಬಯಕೆ ಎಂದರು ಜಿ.ಎಸ್.ಹೆಗಡೆ.
ಅಂಗವಿಕಲರೂ ವಾಹನ ಚಾಲನೆ ಮಾಡಬಹುದು. ಅವರಿಗೆ ವಾಹನದಲ್ಲಿ ಮಾರ್ಪಡು ಮಾಡಲಾಗುತ್ತದೆ. ವೈದ್ಯಕೀಯ ದೃಢಪತ್ರ ಕಡ್ಡಾಯ ಹೊಂದಿರಬೇಕು ಎಂದು ಹೇಳಿದರು.
'ನೀವು ಮೊದಲು' ಆಗಬೇಕು: ವಾಹನ ಚಾಲನೆ ವೇಳೆ 'ನೀವು ಮೊದಲು' ಧೋರಣೆ ಚಾಲಕಲ್ಲಿ ಬರಬೇಕು. ಎದುರಿನ ವಾಹನ ಮೊದಲು ಸಂಚರಿಸಲಿ ಎಂದ ನಿಲವು ವ್ಯಕ್ತಗೊಳ್ಳಬೇಕು. ಯಾವುದೇ ಕಾರಣಕ್ಕೆ ಅವಸರದ ಚಾಲನೆ ಕೂಡದು. ನೈಟ್ರೋಜನ್ ಗ್ಯಾಸ್ ಟಯರ್‌ಗೆ ಹಾಕಿದರೆ ಸ್ಫೋಟಗೊಳ್ಳುವ ಪ್ರಮೇಯ ತಪ್ಪುತ್ತದೆ. ವಾಹನದಲ್ಲಿ ಜೆರಾಕ್ಸ್ ಇರಲಿ, ಒರಿಜಿನಲ್ ಕೈಯಲ್ಲಿರಲಿ ಎಂದು ಕಿವಿ ಮಾತು ಹೇಳಿದರು.