ವಿಟ್ಲ: ರಸ್ತೆಗೆ ಉರುಳಿದ ಮಿನಿ ಲಾರಿ
ವಿಟ್ಲ: ಜಲ್ಲಿ ತುಂಬಿದ್ದ ಮಿನಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಉರುಳಿ ಬಿದ್ದ ಘಟನೆ ತಾಳಿಪಡ್ಪು ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಕುದ್ದುಪದವು ಸಮೀಪದ ಜಲ್ಲಿ ಕ್ರಶರ್ನಿಂದ ಜಲ್ಲಿ ತುಂಬಿಕೊಂಡು ಪೆರುವಾಯಿ ಕಡೆಗೆ ಸಾಗುತ್ತಿದ್ದ ಸಂದರ್ಭ ತಾಳಿಪಡ್ಪು ಇಳಿಜಾರಿನಲ್ಲಿ ಲಾರಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಚಾಲಕನ ಹತೋಟಿ ತಪ್ಪಿ ರಸ್ತೆ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದು ರಸ್ತೆಯಲ್ಲಿ ಉರುಳಿ ನಿಂತಿದೆ.
ಪರಿಣಾಮ ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಹಾಗೂ ಸಹಾಯಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೈಕ್ ಡಿಕ್ಕಿ: ಪಾದಚಾರಿ ಮಹಿಳೆ ಗಾಯ
ಉಡುಪಿ: ಇಲ್ಲಿನ ಸ್ವೀಟ್ಸ್ ಮತ್ತು ಕಾಂಡಿಮೆಂಟ್ಸ್ ಅಂಗಡಿ ಬಳಿ ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆಗೆ ಬೈಕ್ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಬುಧವಾರ ನಡೆದಿದೆ. ಜಯ ಹೆಜಮಾಡಿ ಗಾಯಾಳು. ಆರೋಪಿ ಬೈಕ್ ಸವಾರ ಮೋಂತು ಅಡ್ರಿಯನ್ ಡಿ'ಸೋಜ ನಿರ್ಲಕ್ಷ್ಯದ ಚಾಲನೆ ಘಟನೆಗೆ ಕಾರಣ ಎಂದು ಜಯ ನೀಡಿದ ದೂರಿನಂತೆ ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಡಿಕ್ಕಿ: ಪಾದಚಾರಿ ಗಾಯ
ಕುಂದಾಪುರ: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಬಸ್ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ತಲ್ಲೂರು ಗ್ರಾಮದ ಸುಪ್ರೀಂ ಟೈಲ್ಸ್ ಬಳಿ ಬುಧವಾರ ನಡೆದಿದೆ. ಗಾಯಗೊಂಡವರನ್ನು ಬಸವ ಎಂದು ಗುರುತಿಲಾಗಿದೆ. ಆರೋಪಿ ಚಾಲಕ ನರಸಪ್ಪ ನಿರ್ಲಕ್ಷ್ಯದ ಚಾಲನೆ ಘಟನೆಗೆ ಕಾರಣ ಎನ್ನಲಾಗಿದೆ. ತೀವ್ರ ಗಾಯಗೊಂಡ ಬಸವ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯ ಅಕ್ರಮ ಮಾರಾಟ: ಆರೋಪಿ ಸೆರೆ
ಕೋಟ: ಇಲ್ಲಿನ ಕೆದೂರು ಗ್ರಾಮದ ರೇಲ್ವೆ ಬ್ರಿಜ್ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಮಾಲು ಸಹಿತ ಬುಧವಾರ ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕೋಟ ಪೊಲೀಸ್ ಠಾಣಾಧಿಕಾರಿ ಕೆ. ಆರ್. ನಾಯ್ಕ ಮತ್ತು ಸಿಬ್ಬಂದಿ ದಾಳಿ ನಡೆಸಿ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿ ರಂಗಸ್ವಾಮಿ (63) ಎಂಬವರನ್ನು ಬಂಧಿಸಿ, ಅವರಿಂದ 57 ವಿಸ್ಕಿ ಬಾಟಲ್ ಹಾಗೂ ನಗದು ರು. 330 ವಶಪಡಿಸಿಕೊಂಡಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ಬೆದರಿಕೆ ಕರೆ: ದೂರು
ಉಪ್ಪಿನಂಗಡಿ: ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೃಷ್ಣವೇಣಿಗೆ ದೂರವಾಣಿ ಮೂಲಕ ಬೆದರಿಕೆ ಕರೆ ಬಂದ ಬಗ್ಗೆ ಅವರು ಕಡಬ ಠಾಣೆಗೆ ದೂರು ನೀಡಿದ್ದಾರೆ. ಬುಧವಾರ ಬೆಳಗ್ಗೆ ಇಂಟರ್ನೆಟ್ ಮೂಲಕ ಕರೆ ಮಾಡಿದ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಒಡ್ಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮನೆ ತೆರವು ಪ್ರಕರಣ: ಪಿಡಿಒ ವಿಚಾರಣೆ
ಮಂಗಳೂರು: ಮೂಡುಕೊಣಾಜೆಯ ಆಚಾರಿಬೆಟ್ಟಿನಲ್ಲಿ ಮಾಲತಿ ಪೂಜಾರ್ತಿ ಮನೆ ತೆರವು ಪ್ರಕರಣಕ್ಕೆ ಸಂಬಂಧಿಸಿ ಪಿಡಿಒ ಪ್ರೇಮ್ ಸಿಂಗ್ರನ್ನು ಮಂಗಳೂರಿನ ಸಹಾಯಕ ಕಮಿಷನರ್ ಡಾ.ಪ್ರಶಾಂತ್ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಮಾಲತಿಗೆ ಶಿರ್ತಾಡಿ ಗ್ರಾಮ ಪಂಚಾಯ್ತಿ ನೀಡಿದ ಡೋರ್ ನಂಬರ್ ಸರಿಯಾಗಿದೆ ಎಂಬುದನ್ನು ವಿಚಾರಣೆಯಲ್ಲಿದೃಢಪಡಿಸಲಾಗಿದೆ. ಇದಕ್ಕಾಗಿ ಡಿಮ್ಯಾಂಡ್ ಬುಕ್, ನಿರ್ಣಯ ಪುಸ್ತಕವನ್ನು ಸಹಾಯಕ ಕಮಿಷನರ್ ಪರಿಶೀಲಿಸಿದ್ದಾರೆ. ಡೋರ್ ನಂಬರ್ ಪಡಕೊಳ್ಳುವ ಮೊದಲೇ ಮಾಲತಿಗೆ ಪಂಚಾಯ್ತಿ ದಂಡ ವಿಧಿಸಿರುವುದನ್ನು ದಾಖಲೆಯಲ್ಲಿ ತೋರಿಸಲಾಗಿದೆ. ಆದರೆ ನಿಯಮ ಉಲ್ಲಂಘಿಸಿ ಪಂಚಾಯ್ತಿ ಡೋರ್ ನಂಬರ್ ನೀಡಿದ ಬಗ್ಗೆ ಸೂಕ್ತ ಪುರಾವೆ ಸಿಕ್ಕಿಲ್ಲ ಎನ್ನಲಾಗಿದೆ. ಮಾಲತಿ ಮನೆ ನಿರ್ಮಿಸಿದ ಜಾಗ ಖಾಸಗಿಯೋ ಅಥವಾ ಸರ್ಕಾರಿಯೋ ಎಂಬ ಅಧಿಕಾರಿಗಳ ಗೊಂದಲ ಬಗೆಹರಿದಿಲ್ಲ.