ಯಕ್ಷಗಾನದ ಹಿರಿಯ ಕಲಾವಿದ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಅಸ್ತಂಗತ
ಬಂಟ್ವಾಳ/ಉಡುಪಿ: ತೆಂಕು ಮತ್ತು ಬಡಗು ತಿಟ್ಟುಗಳೆರಡರಲ್ಲೂ ಪ್ರತಿಭಾನ್ವಿತ ಕಲಾವಿದರಾಗಿದ್ದ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ(62) ಮಾ.22ರಂದು ಬೆಳಗಿನ ಜಾವ 4.50ಕ್ಕೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಪತ್ನಿ, ಮೂವರು ಪುತ್ರರು ಹಾಗು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಪಡ್ರೆ ಚಂದ್ರು ಮತ್ತು ಕುರಿಯ ವಿಠಲ ಶಾಸ್ತ್ರಿ ಅವರಿಂದ ತೆಂಕು ತಿಟ್ಟನ್ನೂ, ಹೆರಂಜಾಲು ವೆಂಕಟರಮಣ ಅವರಿಂದ ಬಡಗು ತಿಟ್ಟನ್ನು ಅಭ್ಯಸಿಸಿದ ಸಿದ್ಧಕಟ್ಟೆ ಅವರು, ಕೊರ್ಗಿ ವೆಂಕಟೇಶ್ವರ ಉಪಾಧ್ಯರಿಂದ ಅರ್ಥಗಾರಿಕೆ ಕುರಿತು ಮಾರ್ಗದರ್ಶನ ಪಡೆದಿದ್ದರು. ಅರ್ಥಗಾರಿಕೆಯಲ್ಲಿ ಕೆ. ಕಾಂತ ರೈ, ಕೆ. ವಾಸು ಶೆಟ್ಟಿಯವರಿಂದ ಪ್ರಭಾವಿತರಾಗಿದ್ದರು ಮತ್ತು ಒಬ್ಬ ಪ್ರೌಢ ಅರ್ಥಧಾರಿಯಾಗಿ ಕಲಾರಸಿಕರಿಂದ ಗುರುತಿಸಲ್ಪಟ್ಟಿದ್ದರು.
ವಿವಿಧ ಮೇಳಗಳಲ್ಲಿ ಸೇವೆ: ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ಮಾವಿನಕಟ್ಟೆ ನಿವಾಸಿಯಾದ ಇವರು, ಕಳೆದ ನಾಲ್ಕು ದಶಕಗಳಿಂದ ವಿವಿಧ ಮೇಳದಲ್ಲಿ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ 4 ವರ್ಷಗಳಿಂದ ಹೊಸನಗರ ಮೇಳದಲ್ಲಿ ಹಿರಿಯ ಕಲಾವಿದರಾಗಿದ್ದರು. ಗುರುವಾರ ಕುಂದಾಪುರದಲ್ಲಿ ಯಕ್ಷಗಾನ ಮುಗಿಸಿ, ತಲ್ಲೂರು ಎಂಬಲ್ಲಿಗೆ ಇತರ ಕಲಾವಿದರೊಂದಿಗೆ ವಾಹನದಲ್ಲಿ ಬರುತ್ತಿದ್ದ ವೇಳೆ ಹಠಾತ್ ಮೆದುಳಿಗೆ ಸಂಬಂಧಿಸಿದ ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರನ್ನು ಮಣಿಪಾಲ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿತ್ತು.