ಸೌಜನ್ಯಾ ಪ್ರಕರಣ: ಸಿಬಿಐ ತನಿಖೆ ಆರಂಭ
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪಾಂಗಾಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಗಾಗಿ ಭಾನುವಾರ ಸಿಬಿಐ ತಂಡ ಬೆಳ್ತಂಗಡಿಗೆ ಆಗಮಿಸಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ರಾಜ್ಯಾದ್ಯಂತ ಭಾರಿ ಹೋರಾಟವೇ ನಡೆದಿತ್ತು. ಭಾನುವಾರ ಬೆಳ್ತಂಗಡಿಗೆ ಬಂದ ಸಿಬಿಐನ ಚೆನ್ನೈ ಮೂಲದ ತಂಡದಲ್ಲಿ 4 ಮಂದಿ ಅಧಿಕಾರಿಗಳಿದ್ದಾರೆ. ಸಿಬಿಐ ತಂಡ ಭಾನುವಾರ ಪಾಂಗಳದ ಸೌಜನ್ಯಾಳ ಮನೆಗೆ ಭೇಟಿ ನೀಡಿ, ಆಕೆಯ ಮನೆಯವರೊಂದಿಗೆ ಮಾತನಾಡಿ ಪ್ರಾಥಮಿಕ ಮಾಹಿತಿ ಕಲೆ ಹಾಕಿತು. ಹೆಚ್ಚಿನ ತನಿಖೆಗಾಗಿ ಮಂಗಳೂರಿನ ಪಶ್ಚಿಮ ವಲಯ ಐಜಿಪಿ ಕಚೇರಿಗೆ ಆಗಮಿಸುವಂತೆ ಮನೆ ಮಂದಿಗೆ ತಿಳಿಸಿದ್ದಾರೆ ಎನ್ನಲಾಗಿದೆ.